ಮಂಗಳೂರು: ಮಂಗಳೂರು ತಾಲೂಕಿನ ಗಂಜಿಮಠ ಇಂಡಸ್ಟ್ರಿಯಲ್ ಏರಿಯಾದ ಬಿಗ್ ಬ್ಯಾಗ್ಸ್ ಪ್ರೈ.ಲಿ ಎಂಬ ಪ್ಲಾಸ್ಟಿಕ್ ಬ್ಯಾಗ್ ಉತ್ಪಾದನಾ ಕಂಪನಿ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದೆ.
ಲಾಕ್ ಡೌನ್ ನಡುವೆಯೂ ಕಂಪೆನಿ ತನ್ನ ಕಾರ್ಮಿಕರನ್ನು ಕರೆಸಿಕೊಂಡು ಕಾರ್ಯಾರಂಭವನ್ನು ಮಾಡಿದೆ. ಹೊರರಾಜ್ಯದಿಂದಲೂ ಕಾರ್ಮಿಕರು ಆಗಮಿಸಿದ್ದು ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ಆರಂಭವಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ನೌಕರರನ್ನು ಒಟ್ಟು ಸೇರಿಸಿರಿರುವುದರಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆ ರೆಡ್ ಝೋನ್ ಪಟ್ಟಿಯಲ್ಲಿದ್ದು ಕಂಪೆನಿಯ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ಲಾಸ್ಟಿಕ್ ಬ್ಯಾಗ್ ಗಳನ್ನು ರೆಡಿ ಮಾಡುವ ಈ ಕಂಪೆನಿ ಎಪ್ರಿಲ್ 4ರಂದೇ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿತ್ತು.
ಆದ್ರೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.