ಮಂಗಳೂರು: ಕೆಲಸದ ಒತ್ತಡ ತಪ್ಪಿಸಲು ಮತ್ತು ದೈಹಿಕ ಕ್ಷಮತೆ ಮತ್ತು ಮಾನಸಿಕ ನೆಮ್ಮದಿ ಮೂಡಿಸಲು ಮಂಗಳೂರು ವಕೀಲರ ಸಂಘ ನ್ಯಾಯವಾದಿಗಳಿಗೆ ಯೋಗಾಭ್ಯಾಸವನ್ನು ಆರಂಭಿಸಿದೆ.
ಮಂಗಳೂರು ಹಳೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಕಟ್ಟಡದಲ್ಲಿ ಯೋಗಾಭ್ಯಾಸ ಅಕ್ಟೋಬರ್ 3ರಂದು ದಸರಾದ ಶುಭ ಸಂದರ್ಭದಲ್ಲಿ ಆರಂಭಿಸಲಾಯಿತು.
ಪ್ರಕೃತಿದತ್ತವಾದ ತಂಪಾದ ಗಾಳಿ ಮತ್ತು ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಯೋಗಾಭ್ಯಾಸ ನಡೆಯುತ್ತಿದ್ದು, ನ್ಯಾಯವಾದಿಗಳಲ್ಲಿ ಹೊಸ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಚಾಲನೆ ನೀಡಿದರು. ಮಂಗಳೂರಿನ 35ಕ್ಕೂ ಅಧಿಕ ನ್ಯಾಯವಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಿರಿಯ ನ್ಯಾಯವಾದಿ ಪೂವಪ್ಪ ಅವರ ಮಾರ್ಗದರ್ಶನದಲ್ಲಿ ಈ ಯೋಗಾಭ್ಯಾಸ ನಡೆಯುತ್ತಿದ್ದು, ಪ್ರತಿ ದಿನ ಸಂಜೆ 4-30ರಿಂದ 5-30ರ ವರೆಗೆ ಯೋಗಾಭ್ಯಾಸ ನಡೆಯುಲಿದೆ.
ಉತ್ಸಾಹಿ ವಕೀಲರಿಗೆ ಮುಂಜಾನೆಯೂ ಯೋಗ ಶಿಕ್ಷಣ ನಡೆಸಲು ವಕೀಲರ ಸಂಘ ಚಿಂತನೆ ನಡೆಸಿದೆ.