ಕೊರೊನಾ ಹಿನ್ನೆಲೆ: ನಾಗರಪಂಚಮಿಯಂದು ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಮಂಗಳೂರು: ಈ ಬಾರಿಯ ನಾಗರ ಪಂಚಮಿಗೂ ಕೊರೋನಾ ಬಿಸಿ ತಟ್ಟಿದ್ದು, ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ಶ್ರೀ ಅನಂತ ಪದ್ಮನಾಭ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜು‌. 25ರ ಶನಿವಾರದಂದು ನಾಗರಪಂಚಮಿ ನಡೆಯಲಿದ್ದು, ಆ ದಿನ ಭಕ್ತರ ಪ್ರವೇಶ ಸಂಪೂರ್ಣ ಬಂದ್ ಮಾಡಲಾಗಿದೆ.
ನಾಗರ ಪಂಚಮಿಯಂದು ಇಲ್ಲಿ ಪ್ರತೀ ವರ್ಷ ಲಕ್ಷಾಂತರ ಭಕ್ತರಿಂದ ಪೂಜೆ ಹಾಗೂ ವಿವಿಧ ಸೇವೆಗಳು ನಡೆಯುತ್ತವೆ.
ನಿರ್ಬಂಧ ಹಿನ್ನೆಲೆ ಕ್ಷೇತ್ರದ ಆವರಣಕ್ಕೂ ಭಕ್ತಾದಿಗಳು ಬರುವಂತಿಲ್ಲ. ನಾಗರ ಪಂಚಮಿಯ ದಿನದಂದು ಸೇವೆಗಳು, ಸೇವಾಪ್ರಸಾದ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆಗಳು ಇರುವುದಿಲ್ಲ. ನಾಗ ತಂಬಿಲ, ಪಂಚಾಮೃತ, ಆಶ್ಲೇಷ ಬಲಿ ಮೊದಲಾದ ಯಾವುದೇ ಸೇವೆಗಳು ಇಲ್ಲ ಎಂದು ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.