ಮಂಗಳೂರು: ಕರಾವಳಿ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ

ಮಂಗಳೂರು: ನಾಡಿನೆಲ್ಲೆಡೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ. ಅಂಧಕಾರದಿಂದ ಬೆಳಕಿನೆಡೆಗೆ ಎಂಬ ಸಂದೇಶ ಸಾರುವ ದೀಪಾವಳಿ ದಿನದಂದು ಪ್ರತಿ ಮನೆ-ಮನಗಳಲ್ಲೂ ದೀಪಗಳು ಬೆಳಗಿ ಪ್ರಕಾಶಮಾನವನ್ನಾಗಿಸುತ್ತವೆ. ಈ ಸಂಭ್ರಮ-ಸಡಗರದ ದೀಪಾವಳಿ ಹಬ್ಬವನ್ನು ಮಂಗಳೂರಿನ ಕರಾವಳಿ ಕಾಲೇಜಿನಲ್ಲೂ ವಿದ್ಯಾರ್ಥಿಗಳ ಜತೆ ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು.
ಬೇರೆ ಬೇರೆ ಊರುಗಳಿಂದ ಓದಲು ಬಂದಿರುವ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬದ ಸಂಭ್ರಮ ತಪ್ಪದಂತೆ ಮಂಗಳೂರಿನ ಕರಾವಳಿ ಕಾಲೇಜು ಸಂಸ್ಥೆಯು ಸಡಗರದಿಂದ ದೀಪಾವಳಿ ಹಬ್ಬವನ್ನು ಆಯೋಜಿಸಿತ್ತು. ದೀಪಗಳ ಜೋಡಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಭಾರೀ ಮಳೆಯನ್ನು ಲೆಕ್ಕಿಸದೇ ಸಂಭ್ರಮಪಟ್ಟ ಕ್ಷಣ ವಿಶೇಷವಾಗಿತ್ತು. ವಿವಿಧ ದೇಶ, ರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಮನೆಯಿಂದ ನಾವು ದೂರವಿದ್ದೇವೆ. ತಮಗೆ ಹಬ್ಬದ ಸಂಭ್ರಮವಿಲ್ಲ ಅನ್ನೋ ನೋವು ಕಾಡದಂತೆ ದೀಪಗಳ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗ್ತಿದೆ ಎನ್ನುತ್ತಾರೆ ಕರಾವಳಿ ಸಂಸ್ಥೆ ಮುಖ್ಯಸ್ಥರಾದ ಗಣೇಶ್ ರಾವ್.
ಈ ದೀಪಾವಳಿ ಸಂಭ್ರಮಲ್ಲಿ ಕೇವಲ ದೀಪಗಳು ಮಾತ್ರವಲ್ಲದೆ ಬಾನಿಗೆ ಮುತ್ತಿಕ್ಕಲು ತೆರಳೋ ಆಕಾಶದೀಪಗಳು, ಕತ್ತಲನ್ನು ಒಮ್ಮಿಂದೊಮ್ಮೆಲೇ ಬಣ್ಣ-ಬಣ್ಣದ ಬೆಳಕಿನಿಂದ ಸಿಂಗಾರಗೊಳಿಸೋ ಮಳೆ ಪಟಾಕಿಗಳು ದೀಪಾವಳಿಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಇನ್ನು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ  ಮೂಲಕ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ದೇಶಪ್ರೇಮವನ್ನು ಮೂಡಿಸುವ ಮೂಲಕ ಭೇದ ಭಾವ ಮರೆತು ಭ್ರಾತೃತ್ವ ತುಂಬುವ ಕಾರ್ಯ ಕೂಡಾ ನಡೆಯಿತು. ಇನ್ನು ಬಾಲಿವುಡ್ ಸಾಂಗ್ ಗಳಿಗಂತೂ ವಿದ್ಯಾರ್ಥಿಗಳು ಸಖತ್ತಾಗಿ ಹೆಜ್ಜೆ ಹಾಕಿದರು. ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಈ ಸಡಗರದಲ್ಲಿ ಭಾಗವಹಿಸಿ, ತಮ್ಮ ಪ್ರತಿಭಾ ಪ್ರದರ್ಶನ ಕೂಡಾ ಮಾಡಿದರು.
ಒಟ್ನಲ್ಲಿ ಕಾಲೇಜು ವಿದ್ಯಾರ್ಥಿಗಳ ಜತೆ ಆಯೋಜಿಸಲಾದ ದೀಪಾವಳಿ ಉತ್ಸವ ವಿಶಿಷ್ಠ ಲೋಕವನ್ನೇ ನಿರ್ಮಾಣ ಮಾಡಿತು.