ಪಾರಂಪರಿಕವಾದ ಸಂಪ್ರದಾಯಿಕ ಪದ್ದತಿ ಮೀನುಗಾರಿಕೆ: ಎಂ.ಜೆ. ರೂಪ

ಮಂಗಳೂರು: ಮೀನುಗಾರಿಕೆ ಎನ್ನುವುದು ಪಾರಂಪರಿಕವಾದ ಒಂದು ಸಂಪ್ರದಾಯಿಕ ಪದ್ದತಿ. ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಆಹಾರ ಮೂಲ. ಬಡ ಜನರಿಗೆ ಇದು ಶ್ರೀಮಂತ ಆಹಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಹೇಳಿದರು.
ನಗರದ ಓಷಿಯನ್ ಪರ್ಲ್ ಹೊಟೇಲಿನ ಪೆಸಿಫಿಕ್-5ರ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆ, ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ನಡೆದ ‘ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ’ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತಾನಾಡಿದರು.
ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಿದರು.
 ಮೀನುಗಾರಿಕಾ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ನಿರ್ದೇಶಕ ರಾಮಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಆರೋಗ್ಯಪೂರ್ಣ ಮತ್ತು ವೈಜ್ಞಾನಿಕ ರೀತಿಯ ಮೀನುಗಾರಿಕೆ ಸುಸ್ಥಿರವಾಗಿದೆ. ಅದು ಎಲ್ಲರಿಗೂ ಜೀವನೋಪಾಯ, ಉದ್ಯೋಗವಕಾಶ ಹಾಗೂ ಆರ್ಥಿಕ ಲಾಭ ನೀಡುತ್ತದೆ. ಕೆಲವೊಮ್ಮೆ ಅಧಿಕ ಮೀನು ಹಿಡಿಯುವ ಆತುರದಿಂದ ಮೀನಿನ ಸಂತತಿ ಮತ್ತು ಕಡಲ ಪರಿಸರಕ್ಕೆ  ಹಾನಿ ಉಂಟು ಮಾಡುತ್ತೇವೆ. ಇದರಿಂದ ಉಂಟಾಗುವ ಮುಂದಿನ ಪರಿಣಾಮಗಳನ್ನು ನಾವು ಅರಿತುಕೊಳ್ಳುವುದಿಲ್ಲ. ಮೀನುಗಾರರು ಜವಾಬ್ದಾರಿಯುತ ಮೀನುಗಾರಿಕೆ ನಡೆಸಿ, ಮುಂದಿನ ಜನಾಂಗ ಮೇಲ್ಪದರದ ಚಿಕ್ಕ ಮೀನುಗಾರಿಕೆಯ ಲಾಭ ಪಡೆಯುವಂತೆ ಮಾಡಬೇಕು ಎಂದು ಹೇಳಿದರು.
ಕಾನೂನು ಬಾಹಿರ, ವರದಿ ಮಾಡದಿರುವ ಮತ್ತು ಅನಿಯಂತ್ರಿತ ಮೀನುಗಾರಿಕೆಯನ್ನು ಐಯುಯು ಮೀನುಗಾರಿಕೆ ಎಂದು ಕರೆಯುತ್ತಾರೆ. ಇದು ಮೀನುಗಾರಿಕೆ ನಿರ್ವಹಣೆಗೆ ಮಾರಕವಾಗಿದೆ. ಐಯುಯು ಮೀನುಗಾರಿಕೆ ಕರಾವಳಿಯ ಬಡಜನರ ಜೀವನೋಪಾಯಕ್ಕೆ ಮಾರಕವಾಗುವುದರ ಜೆತೆಗೆ ಬಡತನ ಹಾಗೂ ಆಹಾರ ಅಭದ್ರತೆ ಹೆಚ್ಚಿಸುತ್ತದೆ ಎಂದರು.
ಸಿಡಿಮದ್ದು ಬಳಸಿ ಮಾಡವ ಮೀನುಗಾರಿಕೆ, ಪ್ರಖರ ಬೆಳಕಿನ ಮೂಲಕ ಹಿಡಿಯುವ ಮೀನುಗಾರಿಕೆ, ವಿಷ ಪದಾರ್ಥ ಬಳಕೆ, ನಿಷೇಧಿತ ಏಕ ನೂಲಿನ ಬಲೆ ಉಪಯೋಗಿಸುವುದು, ಸಮುದ್ರ ತಳ ಸವರುವ ಟ್ರಾಲ್ ಬಲೆಗಳು, ಭಾರವಾದ ಲೋಹ ಅಳವಡಿಸಿರುವ ಟ್ರಾಲ್ ಬಲೆಗಳು, ಬುಲ್ ಟ್ರಾಲಿಂಗ್, ದ್ವಿದೋಣಿ ಟ್ರಾಲ್ ಮೀನುಗಾರಿಕೆ ಇತ್ಯಾದಿ ವಿನಾಶಕಾರಿ ಮೀನುಗಾರಿಕೆಯ ವಿಧಾನಗಳು ಈ ಎಲ್ಲಾ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸುವುದರಿಂದ ಮೀನಿನ ಸಂಪನ್ಮೂಲಕ್ಕೆ ಹಾನಿಯಾಗುವುದನ್ನು ತಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಡೀನ್ ಡಾ| ಎ. ಸೆಂಥಿಲ್ ವೇಲ್, ಏಷಿಯನ್ ಫಶರೀಸ್ ಸೊಸೈಟಿ ಭಾರತೀಯ ಶಾಖೆ ಯೋಜನಾ ಮುಖ್ಯ ಸಂಶೋಧಕರು ಡಾ| ಪಿ. ಕೇಶವನಾಥ್, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಪ್ರಾಧ್ಯಾಪಕರು ಡಾ| ಎಸ್. ಎಂ. ಶಿವಪ್ರಕಾಶ್ ಹಾಗೂ ಏಷಿಯನ್ ಫಿಶರೀಸ್ ಸೊಸೈಟಿ ಭಾರತೀಯ ಶಾಖೆ ಉಪಾಧ್ಯಕ್ಷರು ಡಾ| ಬಿ. ಎ. ಶ್ಯಾಮಸುಂದರ್ ಉಪಸ್ಥಿತರಿದ್ದರು.