ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ನೇತ್ರ ಚಿಕಿತ್ಸೆ ಕೇಂದ್ರಗಳ ಅತಿ ದೊಡ್ಡ ನೆಟ್ ವರ್ಕ್ ಹೊಂದಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ತನ್ನ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನಿರಂತರವಾಗಿ ನೇತ್ರ ಚಿಕಿತ್ಸೆಗೆ ಸಂಬಂಧಿಸಿದ ಸಮುದಾಯ ಸೇವೆಗಳನ್ನು ಕಳೆದ 12 ವರ್ಷಗಳಿಂದ ನೀಡುತ್ತಿದೆ.
ರಾಜ್ಯದ 7 ಜಿಲ್ಲೆಯನ್ನೊಳಗೊಂಡಂತೆ ದೇಶದ 4 ರಾಜ್ಯಗಳಲ್ಲಿ ಶಿಬಿರಗಳನ್ನು ನಡೆಸುತ್ತಾ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಮೂಲಕ ಜನರ ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಕೊಡುಗೆಗಳನ್ನು ಸಲ್ಲಿಸುತ್ತಾ ಬಂದಿದೆ.
ಈ ಸೇವೆಗಳಿಗೆ ಪೂರಕವಾಗುವಂತೆ ಮಹತ್ತರವಾದ ‘ಸರ್ವರಿಗೂ ದೃಷ್ಟಿ’ ಎಂಬ ನೂತನ ಸೇವೆಯನ್ನು ಪ್ರಸಾದ್ ನೇತ್ರಾಲಯವು ಆರಂಭಿಸುತ್ತಿದೆ. ಸಂಚಾರಿ ನೇತ್ರ ಚಿಕಿತ್ಸಾಲಯವು (ಮೊಬೈಲ್ ಐ ಕ್ಲಿನಿಕ್- ಕ್ಲಿನಿಕ್ ಆನ್ ವ್ಹೀಲ್ಸ್) ನೇತ್ರ ಪರೀಕ್ಷಣೆ ಸೌಲಭ್ಯವನ್ನು ವಾಹನದಲ್ಲಿ ಅಳವಡಿಸಿಕೊಂಡು, ನುರಿತ ವೈದ್ಯರು ಹಾಗೂ ತಂತ್ರಜ್ಞ ಸಹಾಯಕರು ಹಳ್ಳಿಗಳಿಗೆ ತೆರಳಿ ಜನರ ಬಳಿಗೆ ಹೋಗಿ ನೇತ್ರ ಪರೀಕ್ಷೆ ಮಾಡುವುದು ಇದರ ಉದ್ದೇಶವಾಗಿದೆ.
ಬೆಂಗಳೂರಿನ ಸೆಂಚುರಿ ಗ್ರೂಪ್ ನ ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ನಿಂದ ಪ್ರಾಯೋಜಿತವಾದ ಈ ವಾಹನಕ್ಕೆ ಜರ್ಮನಿ ಮೂಲದ ಕಾರ್ಲ್ ಜೈಸ್ ಇಂಡಿಯಾ (ಬೆಂಗಳೂರು) ವು ನೇತ್ರ ಪರೀಕ್ಷೆ ಉಪಕರಣಗಳನ್ನು ನೀಡಿ ಪ್ರಾಯೋಜಿಸಿದೆ.
ಈ ವ್ಯವಸ್ಥೆಯನ್ನು ಆ.30 ರಂದು ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಸೆಂಚುರಿ ಗ್ರೂಪ್ ನ ಅಧ್ಯಕ್ಷ ಡಾ. ಪಿ. ದಯಾನಂದ ಪೈ ಯವರು ವಾಹನವನ್ನು ಹಸ್ತಾಂತರಿಸಲಿದ್ದಾರೆ.