ಮಂಗಳೂರು: ಲೇಡಿಹಿಲ್ ಬಳಿ ಬುಧವಾರ ಮಧ್ಯಾಹ್ನ ಯುವತಿಯೊಬ್ಬಳು ಸಾವನ್ನಪ್ಪಿದ ಹಿಟ್ ಅಂಡ್ ರನ್ ಪ್ರಕರಣದ ತನಿಖೆಯನ್ನು ನಗರ ಪೊಲೀಸರು ಆರಂಭಿಸಿದ್ದಾರೆ.
ಐವರು ಹುಡುಗಿಯರು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಮಲೇಶ್ ಬಲದೇವ್ ಚಲಾಯಿಸುತ್ತಿದ್ದ ಕಾರು ಅವರ ಮೇಲೆ ಹರಿದಿತ್ತು. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇಡೀ ದುರಂತ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, “ಚಾಲಕ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಚಾಲಕ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿದ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಕಾರಿನ ಇಂಜಿನ್ ಹೆಚ್ಚು ಬಿಸಿಯಾದ ಕಾರಣ ವಾಹನದ ಮೇಲೆ ನಿಯಂತ್ರಣ ತಪ್ಪಿದೆ ಎಂದು ಚಾಲಕ ಹೇಳಿದ್ದಾರೆ. ವಾಹನದಲ್ಲಿ ತಾಂತ್ರಿಕ ದೋಷವಿದೆಯೇ ಎಂಬ ಬಗ್ಗೆ ಆರ್‌ಟಿಒ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಹೆಚ್ಚುವರಿಯಾಗಿ, ಇತರ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಒಳಗೊಂಡಂತೆ ಇತರ ಸಾಧ್ಯತೆಗಳನ್ನು ಸಹ ಪರಿಶೀಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಅಪಘಾತದ ವೇಳೆ ಕಾರಿನ ಚಾಲಕ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದನೆ ಎನ್ನುವುದನ್ನು ಕೂಡಾ ತನಿಖೆ ನಡೆಸಲಾಗಿದೆ. ಮೊಬೈಲ್ ಫೋನ್ ಬಳಕೆ ಸಂದರ್ಭ ಸ್ಟೀರಿಂಗ್ ನಿಯಂತ್ರಣವನ್ನು ಕಳೆದುಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಅಪಘಾತಕ್ಕೂ ಮುನ್ನ ಪೊಲೀಸರು ಕಾರಿನ ಪ್ರಯಾಣದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಗಳು, ಫುಟ್ ಪಾತ್ ನ ಸಂಕೀರ್ಣತೆ ಮತ್ತು ಎಲ್ಲೆಂದರಲ್ಲಿ ಪಾರ್ಕ್ ಮಾಡುವ ವಾಹನಗಳಿಂದಾಗಿ ಪಾದಚಾರಿಗಳು ಅಪಘಾತಕ್ಕೆ ಸಿಲುಕುತ್ತಿರುವ ಘಟನೆಗಳು ನಿತ್ಯ ವರದಿಯಾಗುತ್ತಿವೆ.












