ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ 2019ನೇ ಸಾಲಿನಲ್ಲಿ ಹೊರಡುವ ಹಜ್ಜಾಜ್ಗಳ ವಿಮಾನ ಯಾತ್ರೆಗೆ ಮಂಗಳೂರಿನ ಬಜ್ಪೆಯ ಖಾಸಗಿ ಸ್ಕೂಲ್ ನ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಯುಟಿ ಖಾದರ್ ಅವರು ಮಾತನಾಡಿ, ಹಜ್ ಯಾತ್ರೆಯ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ. ಕೋಟ್ಯಾಧಿಪತಿಯು ಹಜ್ ಯಾತ್ರೆಯ ಅವಕಾಶದಿಂದ ವಂಚಿತರಾಗಿದ್ದೇವೆ. ನಿರ್ಗತಿಕರು ಹಜ್ ಯಾತ್ರೆ ಪೂರೈಸಿದ್ದಿದೆ. ಅದೆಲ್ಲಾ ಅಲ್ಲಾಹನ ಅನುಗ್ರಹವಾಗಿದೆ. ಹಾಗಾಗಿ ಪವಿತ್ರ ಹಜ್ ಯಾತ್ರೆಯಲ್ಲಿ ದೇಶದ ಎಲ್ಲಾ ಜನರ ಒಳಿತಿಗಾಗಿ, ಶಾಂತಿ-ಸೌಹಾರ್ದಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಕರೆ ಎಂದರು. ಕಳೆದ ಹನ್ನೊಂದು ವರ್ಷಗಳಿಂದ ಮಂಗಳೂರಿನಿಂದ ಹಜ್ ಯಾತ್ರೆ ಆರಂಭವಾಗಿದೆ.
ಕರ್ನಾಟಕದಿಂದ ಈ ಬಾರಿ 8739 ಮಂದಿ ಹಜ್ಗೆ ಪ್ರಯಾಣಿಸುತ್ತಿದ್ದು, ಕಳೆದ ಬಾರಿ 6,300 ಮಂದಿ ಯಾತ್ರೆ ಮಾಡಿದ್ದರು. ಇದರಲ್ಲಿ ಮಂಗಳೂರು ಕೇಂದ್ರದಿಂದ 747 ಮಂದಿ ಹಜ್ ಯಾತ್ರಿಗಳು ಯಾತ್ರೆ ಮಾಡುತ್ತಿದ್ದಾರೆ. ಪವಿತ್ರ ಮೆಕ್ಕಾ, ಮದೀನಾದಲ್ಲಿ 40 ದಿನಗಳ ಯಾತ್ರೆಗೆ ಇವರು ಸಿದ್ಧಗೊಂಡಿದ್ದು, ಇಂದಿನಿಂದ ಶುಕ್ರವಾರದವರೆಗೆ 5 ವಿಮಾನಗಳಲ್ಲಿ ಈ ಎಲ್ಲ ಹಜ್ ಪ್ರಯಾಣಿಕರು ಮದೀನಾ ತಲುಪಲಿದ್ದಾರೆ.
ಇಂದು ಸಂಜೆ 6.40ರ ವಿಮಾನದಲ್ಲಿ 150 ಮಂದಿ, ನಾಳೆ ಬೆಳಿಗ್ಗೆ 11.30ಕ್ಕೆ 150 ಮಂದಿ, 12.30ಕ್ಕೆ149 ಮಂದಿ, ರಾತ್ರಿ 12.30ಕ್ಕೆ 139 ಮಂದಿ ಮತ್ತು ಸಂಜೆ 5.30ಕ್ಕೆ 159 ಮಂದಿ ಯಾತ್ರಿಗಳು ಮಕ್ಕಾ – ಮದೀನಾಗೆ ಪ್ರಯಾಣ ಬೆಳೆಸಲಿದ್ದಾರೆ. 40 ದಿನದ ಹಜ್ ಯಾತ್ರೆಯ ವಿಮಾನ ಮೊದಲಿಗೆ ಮದೀನಾ ತಲುಪಲಿದ್ದು, ಅಲ್ಲಿ 10 ದಿನದ ಯಾತ್ರೆ ಮುಗಿದ ಬಳಿಕ ಒಂದು ತಿಂಗಳು ಯಾತ್ರಿಗಳು ಮೆಕ್ಕಾದಲ್ಲಿ ಇರಲಿದ್ದಾರೆ.
ಯಾತ್ರೆ ಮುಗಿದು ಸೆಪ್ಟೆಂಬರ್ 1, 2, 3ಕ್ಕೆ ಹಜ್ ಯಾತ್ರಿಗಳು ಮರಳಿ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.