ಮಂಗಳೂರು: ಕರಾವಳಿಯ ಅತ್ಯಂತ ಪುರಾತನ ದೇಗುಲಗಳಲ್ಲಿ ಒಂದಾಗಿರುವ ಬೋಳಾರ ಹಳೇಕೋಟೆ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಕುರಿತು ಮಾತನಾಡಿದ ಅವರು ಸುಮಾರು 800 ವರ್ಷಗಳ ಇತಿಹಾಸವಿರುವ ಬೋಳಾರ ಹಳೇಕೋಟೆ ಮಾರಿಯಮ್ಮ ಮಹಿಷ ಮರ್ಧಿನಿ ದೇವಸ್ಥಾನವು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪೌರಾಣಿಕ ಇತಿಹಾಸಗಳ ಕುರುಹುಗಳನ್ನು ಉಳಿಸಿಕೊಂಡಿರುವ ದೇವಾಲಯಗಳಲ್ಲಿ ಒಂದಾಗಿದೆ. ನಗರದ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿ ವಹಿಸಿರುವ ನಮ್ಮ ಸರಕಾರ ಶ್ರೀ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 20 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ. ಅದಕ್ಕಾಗಿ ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರಿಬ್ಬರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸಬೇಕು ಎಂದಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಅನೇಕ ಪುರಾತನ ಕಾಲದ ದೇವಾಲಯಗಳಿವೆ. ಇವೆಲ್ಲವನ್ನೂ ಅಭಿವೃದ್ಧಿಪಡಿಸುವ ಮಹತ್ತರವಾದ ಹೊಣೆಗಾರಿಕೆಯೊಂದಿಗೆ ನಾವೆಲ್ಲರೂ ಒಂದಾಗಿ ಶ್ರಮಿಸಬೇಕು. ಧಾರ್ಮಿಕ ನಂಬಿಕೆಗಳನ್ನು ಬಲಪಡಿಸಬೇಕಿದ್ದರೆ ಕ್ಷೇತ್ರಗಳ ಅಭಿವೃದ್ಧಿ ಅಗತ್ಯವೆಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನವನೀತ ಶೆಟ್ಟಿ ಕದ್ರಿ, ಸ್ಥಳೀಯ ಕಾರ್ಪೊರೇಟರ್ ಗಳಾದ ರೇವತಿ ಶ್ಯಾಮ ಸುಂದರ, ಪ್ರೇಮಾನಂದ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ತಾರನಾಥ ಶೆಟ್ಟಿ ಬೋಳಾರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ, ಬಿ. ಕೇಶವ ಶೆಟ್ಟಿ, ಪ್ರಧಾನ ಅರ್ಚಕ ನಾರಾಯಣ ಭಟ್, ಪ್ರವೀಣ್ ಶೇಟ್, ದೀಪಕ್ ಪೈ, ರಮಾನಂದ ಪೂಜಾರಿ, ಗಂಗಾಧರ ಕೋಟ್ಯಾನ್, ಮುರುಳಿಧರ್ ಬೋಳಾರ್, ಉಮಾನಾಥ ಶೆಟ್ಟಿಗಾರ್, ಅನಿಲ್, ಸುನಿಲ್ ಸೇರಿದಂತೆ ಹಲವು ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.