ಗಿರ್ ಗಿಟ್ ನಿಷೇದಾಜ್ಞೆ ವಿಚಾರ: FB ಖಾತೆಗಳ ಟೀಕೆ, ಆರೋಪಿಗಳಿಗೆ ವಕಾಲತು ಹಾಕಲ್ಲ: ವಕೀಲರ ಸಂಘ ನಿರ್ಧಾರ

ಮಂಗಳೂರು: ಗಿರಿಗಿಟ್ ಚಿತ್ರದ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ ನ್ಯಾಯವಾದಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಈಗಾಗಲೇ ಎರಡು ಖಾತೆಗಳನ್ನು ಸ್ತಂಬನ ಮಾಡಲಾಗಿದ್ದು, ಇನ್ನಷ್ಟು ಫೇಸ್‌ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡು ಆರೋಪಿಗಳನ್ನು ತಕ್ಷಣ ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಬಂದರು ಠಾಣೆಯಲ್ಲಿ ತಮ್ಮನ್ನು ಭೇಟಿಯಾದ ವಕೀಲರ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ. ಈಗಾಗಲೇ ಫೇಸ್‌ಬುಕ್‌ನ ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಟ್ರೋಲ್ ಮರ್ಲೆರ್ ಮತ್ತು ಟ್ರೋಲ್ ನಂಜೆಲೆ ಎಂಬ ಎರಡು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನಷ್ಟು ಖಾತೆಗಳ ವಿವರವನ್ನು ಕೋರಲಾಗಿದೆ. ಕೆಲವು ಖಾತೆಗಳ ವಿವರ ಈಗಾಗಲೇ ಪೊಲೀಸ್ ಇಲಾಖೆಯ ಕೈ ಸೇರಿದೆ. ವೈಯಕ್ತಿಕವಾಗಿ ಕೆಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸೋಮವಾರ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಎಸಿಪಿ ಭಾಸ್ಕರ್ ಭರವಸೆ ನೀಡಿದ್ದಾರೆ.
ಆರೋಪಿಗಳ ಪರ ವಕಾಲತ್ತು ಇಲ್ಲ; ಸಂಘ ಸ್ಪಷ್ಟನೆ
ವಕೀಲರ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿರುವ ಕಿಡಿಗೇಡಿಗಳ ವಿರುದ್ಧ ಮಂಗಳೂರು ವಕೀಲರ ಸಂಘದ ಯಾವ ಸದಸ್ಯರೂ ವಕಾಲತ್ತು ಹಾಕುವುದಿಲ್ಲ. ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವುದಿಲ್ಲ ಎಂದು ಮಂಗಳೂರು ವಕೀಲರ ಸಂಘ ಸ್ಪಷ್ಟಪಡಿಸಿದೆ.
ಅಲ್ಲದೆ, ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಯ ಇತರ ವಕೀಲರ ಸಂಘಕ್ಕೂ ಆರೋಪಿಗಳ ಪರ ವಕಾಲತ್ತು ಹಾಕದಂತೆ ಮನವಿ ಮಾಡಲಾಗುವುದು ಎಂದು ಸಂಘ ತಿಳಿಸಿದೆ.
ವಕೀಲರಿಂದ ಪ್ರತ್ಯೇಕ ದೂರು ಸಲ್ಲಿಕೆ
ಗಿರಿಗಿಟ್ ಚಿತ್ರದ ವಿರುದ್ಧ ಮಂಗಳೂರಿನ ವಕೀಲರನ್ನು ಪ್ರತಿನಿಧಿಸಿ ಮಂಗಳೂರು ವಕೀಲರ ಸಂಘ ನ್ಯಾಯಾಲಯ ಮೆಟ್ಟಿಲೇರಿತ್ತು. ಈ ಮಧ್ಯೆ, ಗಿರಿಗಿಟ್ ಚಿತ್ರ ತಂಡ ಹಾಗೂ ಚಿತ್ರತಂಡದ ಪ್ರಮುಖರು, ಗಣ್ಯರು ವಕೀಲರ ಸಂಘವನ್ನು ಸಂಪರ್ಕಿಸಿ ಆಗಿರುವ ಗೊಂದಲವನ್ನು ಸರಿಪಡಿಸುವ ಭರವಸೆ ನೀಡಿದ್ದು, ವಿವಾದವನ್ನು ಸುಖಾಂತ್ಯಗೊಳಿಸುವಂತೆ ಮನವಿ ಮಾಡಿದ್ದರು. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ತಂಡ ಒಪ್ಪಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಚಿತ್ರ ಪ್ರದರ್ಶನ ಮುಂದುವರಿಸುವಂತೆ ಮನವಿ ಮಾಡಲಾಗಿತ್ತು. ಎಲ್ಲವೂ ಸೌಹರ್ದವಾಗಿ ಮುಕ್ತಾಯ ಕಾಣುತ್ತಿರುವ ಹಂತದಲ್ಲಿ ಸಾಮಾಜಿಕ ತಾಣದಲ್ಲಿ ಕೆಲವು ಕಿಡಿಗೇಡಿಗಳು ಕೆಲ ವಕೀಲರನ್ನು ವೈಯಕ್ತಿಕವಾಗಿ ನಿಂದಿಸಿರುವ ಪ್ರಕರಣಗಳು ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಮತ್ತು ಶುಕರಾಜ್ ಕೊಟ್ಟಾರಿ ವೈಯಕ್ತಿಕವಾಗಿ ಎರಡು ಪ್ರತ್ಯೇಕ ದೂರುಗಳನ್ನು ನೀಡಿದರು. ದೂರಿನ ಜೊತೆಗೆ ಚಾರಿತ್ರ್ಯ ವಧೆ ಮಾಡಿರುವ ಮತ್ತು ಅವಹೇಳಕಾರಿ ಸಂದೇಶ ಇರುವ ಫೇಸ್ ಬುಕ್ ಸ್ಕ್ರೀನ್ ಶಾಟ್‌ಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಅಧಿಕಾರಿಗಳು ಭರವಸೆ ನೀಡಿದರು.
ವಕೀಲರ ಸಂಘದ ನಿಯೋಗದಲ್ಲಿ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್, ಹಿರಿಯ ವಕೀಲರಾದ ಎಂ.ಪಿ. ನೊರೋನ್ಹಾ, ಸುಮನಾ ಶರಣ್, ಅರುಣಾ ಬಿ.ಪಿ. ಶ್ರೀಧರ್ ಎಣ್ಮಕಜೆ, ಸಂಘದ ಕಾರ್ಯಕಾರಿ ಸಮಿತಿ ಎಲಿಜಬೆತ್ ನೆಲ್ಯಾರ, ಯುವರಾಜ್, ಶುಕರಾಜ್ ಕೊಟ್ಟಾರಿ, ವಿನಯ್ ಕುಮಾರ್, ಪ್ರೇಮ್, ರವಿರಾಜ್, ವಿಜಯ ಕುಮಾರ್, ಪ್ರವೀಣ,  ಪ್ರಮೋದ್ ಕೆರ್ವಾಶೆ, ರಾಮಚಂದ್ರ, ಹರೀಶ್, ಅಸ್ಗರ್, ಸುಕೇಶ್ ಕುಮಾರ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.