ಒಂದೇ ದಿನದಲ್ಲಿ‌ ನನಗೆ ದೇಶದ್ರೋಹಿ ಪಟ್ಟ ಕಟ್ಟಿದರು: ಸಸಿಕಾಂತ್ ಸೆಂಥಿಲ್ ಬೇಸರ

ಮಂಗಳೂರು: 10 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಕೇವಲ ಒಂದೇ ದಿನದಲ್ಲಿ ದೇಶದ್ರೋಹಿ ಎಂದು ನನ್ನನ್ನು ಕರೆದಿದ್ದಾರೆ ಎಂದು ಮಾಜಿ ಐಎಎಸ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ನಿಕಟ ಪೂರ್ವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ‌ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮಂಗಳೂರಿನ ಗರೋಡಿ ಬ್ರಹ್ಮಬೈದರ್ಕಳ ದೇವಸ್ಥಾನ ದಲ್ಲಿ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಸಸಿಕಾಂತ್ ಸೆಂಥಿಲ್ ಬಾಪು ಮತ್ತು ರಾಷ್ಟ್ರೀಯತೆ ವಿಚಾರದಲ್ಲಿ ಉಸನ್ಯಾಸ ನೀಡಿದರು.
ರಾಜೀನಾಮೆ ಕೊಟ್ಟ ಬಳಿಕ ಹಲವು ಮಂದಿ ನನ್ನನ್ನು ಬೇರೆ ಬೇರೆ ರೀತಿಯಲ್ಲಿ ಬಣ್ಣಿಸಿದ್ದಾರೆ. ಆದರೆ ದೇಶ ವಿರೋಧಿ ಎಂದಿರುವುದು ಬೇಸರವಾಗಿದೆ ಎಂದರು.
ಮಹಾತ್ಮಗಾಂಧಿ ಅವರ ‌ಕುರಿತಾಗಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ನಮ್ಮ ರಾಷ್ಟ್ರಪಿತ. ಈಗಲೂ ಅವರೇ ರಾಷ್ಟ್ರ ಪಿತ ಅಂತಾ ನಂಬಿದ್ದೇನೆ. ಆದರೆ ಕೆಲವರು ಈಗ ರಾಷ್ಟ್ರಪಿತವಾಗುತ್ತಿದ್ದಾರೆ ಎಂದರು.