ಮಂಗಳೂರು: ಸಿಎಎ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಹಿತಿ ನೀಡುವ ಕಾರ್ಯಗಾರವನ್ನು ವಿಧಾನಪರಿಷತ್ ಮಾಜಿ ಸಭಾಪತಿ ಬಿ. ಎಲ್. ಶಂಕರ್ ಉದ್ಘಾಟಿಸಿದರು.
ಮಂಗಳೂರಿನ ಕುಲಶೇಖರದ ಕೋರ್ಡೆಲ್ ಹಾಲ್ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಎಲ್ಲಿಯವರೆಗೆ ಸಂವಿಧಾನ ರಕ್ಷಣೆ ಮಾಡಲು ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ಯಾರೇ ಭಾರತೀಯನನ್ನು ಪೌರ ಅಲ್ಲ ಎಂದು ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದರು.
ದೇಶದ ಸಂವಿಧಾನ ಬಲಿಷ್ಠವಾಗಿದ್ದು, ಈ ಸಂವಿಧಾನ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಮೊದಲು ರಾಷ್ಟ್ರಧ್ವಜದ ಬಗ್ಗೆ ಗೌರವ ನೀಡದವರು ಸಿಎಎ ಹೋರಾಟದ ಪರಿಣಾಮವಾಗಿ ಒಂದು ಕೈಯಲ್ಲಿ ರಾಷ್ಟ್ರಧ್ವಜ ಮತ್ತೊಂದು ಕೈಯಲ್ಲಿ ಸಂವಿಧಾನ ಹಿಡಿದುಕೊಂಡಿದ್ದಾರೆ.
ತಮ್ಮ ಪಕ್ಷ ಮತ್ತು ಸಮುದಾಯದ ಬಾವುಟವನ್ನು ಮಾತ್ರ ಹಿಡಿದುಕೊಂಡು ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾಕದವರು, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ ರಾಷ್ಟ್ರಧ್ವಜ ಹಾರಿಸದಿದ್ದವರು ಇದೀಗ ರಾಷ್ಟ್ರಧ್ವಜ ಹಿಡಿಯುವಂತೆ ಈ ಹೋರಾಟ ಮಾಡಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಭವ್ಯ ನರಸಿಂಹ ಮೂರ್ತಿ ಅವರು ಮಾತನಾಡಿ, ಸಿಎಎ ಮುಸ್ಲಿಂ ವಿರೋಧಿ ಮಾತ್ರವಲ್ಲ, ಅದು ಬಡ ಹಿಂದುಗಳ, ದಲಿತರ, ಆದಿವಾಸಿಗಳ, ಅಲೆಮಾರಿಗಳ ವಿರೋಧಿಯಾಗಿದೆ. ಸಿಎಎ ಎನ್ ಆರ್ ಸಿ ಯಿಂದ ಸಂಕಷ್ಟಕ್ಕೊಳಗಾಗುವ ಇವರಿಗೆ ದಾಖಲೆ ನೀಡುವುದು ಹೇಗೆ ಸಾಧ್ಯ. ಇದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಯು. ಟಿ. ಖಾದರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರುಗಳಾದ ಜೆ ಆರ್ ಲೋಬೋ, ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು.