ಮಂಗಳೂರು: ದೇಶದ ಆರ್ಥಿಕ ಸ್ಥಿತಿ ಬಗ್ಗೆ ಭಯ ಶುರುವಾಗಿದೆ. ದೇಶದ ಜನರು ಆರ್ಥಿಕ ಕುಸಿತದಿಂದ ಆತಂಕಗೊಂಡಿದ್ದಾರೆ. ಬಂಡವಾಳ ಹೂಡುವವರು ಮುಂದೆ ಬರುತ್ತಿಲ್ಲ. ಗ್ರಾಮೀಣ ಮಟ್ಟದ ವ್ಯಾಪಾರಸ್ಥರು ಆತ್ಮಹತ್ಯೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ವಿಶ್ವದಲ್ಲೇ ತಲೆ ತಗ್ಗಿಸುವತ್ತ ಸಾಗುತ್ತಿದೆ. ಆರ್ ಬಿಐನಿಂದಲೇ ಕೇಂದ್ರ ಸರ್ಕಾರ ಸಾಲ ತೆಗೆದುಕೊಂಡಿದೆ. ಎಮರ್ಜೆನ್ಸಿ ಅನಂತರ ರಿಸರ್ವ್ ಬ್ಯಾಂಕ್ ನಿಂದ ಕೇಂದ್ರ ಸರ್ಕಾರ ಹಣ ತೆಗೆದುಕೊಂಡಿದೆ. ಸ್ವೀಸ್ ಬ್ಯಾಂಕ್ ನಿಂದ ಕಪ್ಪುಹಣ ತಾರದೇ RBI ನಿಂದ ವೈಟ್ ಮನಿ ತೆಗೆದುಕೊಂಡಿದ್ದಾರೆ. ಯಾಕೆ ಸಾಲ ತೆಗೆದಿದ್ದಾರೆ ಎಂಬುದನ್ನು ಮೋದಿಯವರು ಹೇಳಬೇಕು. ದಬ್ಬಾಳಿಕೆ ಮೂಲಕ ಅಧಿಕಾರ ನಡೆಸುವುದು ಆತಂಕಕಾರಿ ವಿಚಾರ. ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿ ಕಪ್ಪು ಹಣ ತಂದಿದ್ದಾರ? ದಕ್ಷಿಣದಲ್ಲಿ ಉಗ್ರರು ನುಸುಳಿದ್ದಾರೆ ಅಂತಾರೆ, ಹಾಗಾದರೆ ಭದ್ರತೆ ಎಲ್ಲಿದೆ..? ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿಳಂಬ ವಿಚಾರ ಕುರಿತಂತೆ ಸ್ಕಾಲರ್ಶಿಪ್ ವಿತರಣೆಯಲ್ಲಿ ಬ್ಯಾಂಕ್ ಗಳು ಆಟವಾಡಿದರೆ ಕ್ರಮ ಕೈಗೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡವೇ ಬಂದಿಲ್ಲ. ಸಿಎಂ ಯಡಿಯೂರಪ್ಪ, ಕರಾವಳಿ ಶಾಸಕರು ಮೌನವಾಗಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಸಂಸದರು ವಿಫಲರಾಗಿದ್ದಾರೆ. ಮಂಗಳೂರು ಸಂಸದರು ಕೂಡಾ. ಕೇಂದ್ರ ಅಧ್ಯಯನ ತಂಡವನ್ನು ಕರೆಸಿಕೊಳ್ಳಲು ಸಂಸದ ವಿಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.