ಮಂಗಳೂರು: 1,500 ಕೆ.ಜಿ.ಗೂ ಅಧಿಕ ಸ್ಫೋಟಕ ಸಾಮಗ್ರಿ ವಶ; ಓರ್ವನ ಬಂಧನ

ಮಂಗಳೂರು: ನಗರದ ಬಂದರ್ ನ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ 1,500 ಕೆ.ಜಿ.ಗೂ ಅಧಿಕ ಅಪಾಯಕಾರಿ ಸ್ಫೋಟಕ ಸಾಮಗ್ರಿಗಳನ್ನು ದಾಸ್ತಾನು ಇಟ್ಟಿದ್ದ ಘಟನೆ ಇಂದು ಬೆಳಕಿಗೆ ಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲ್ಲೂಕು ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಬಂಧಿತ ಆರೋಪಿ.

ಆರೋಪಿಯಿಂದ 400 ಕೆ.ಜಿ. ಸಲ್ಫರ್ ಪೌಡರ್, 350 ಕೆ.ಜಿ. ಪೊಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬೇರಿಯಂ ನೈಟ್ರೇಟ್, 395 ಕೆ.ಜಿ. ಪೊಟ್ಯಾಷಿಯಂ ಕ್ಲೊರೈಟ್, 260 ಕೆ.ಜಿ. ತೂಕದ ವಿವಿಧ ಬಗೆಯ ಅಲ್ಯುಮಿನಿಯಂ ಪೌಡರ್, 30 ಕೆ.ಜಿ. ಲೆಡ್ ಬಾಲ್ಸ್, 240 ಕೆ.ಜಿ. ಚಾರ್ಕೊಲ್, 100 ಏರ್‌ ರೈಲ್‌ಗಳನ್ನು ಒಳಗೊಂಡ 140 ಪಿಲೆಟ್ಸ್ ಪ್ಯಾಕೇಟ್, 100 ಏರ್ ರೈಲ್‌ಗಳನ್ನು ಒಳಗೊಂಡ 21 ಪಿಲೆಟ್ಸ್ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1,500 ಕೆ.ಜಿ. ತೂಕದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ₹ 1.11 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.