ಮಂಗಳೂರು:“ನಾಲ್ಕು ದಶಕಗಳ ಶೈಕ್ಷಣಿಕ ಸಾರ್ಥಕತೆಗೆ ಸಾಕ್ಷಿಯಾದ 40ನೇ ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭ

ಮಂಗಳೂರು:ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ, ನಿರಂತರ
ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಆತ್ಮವಿಶ್ವಾಸ ಇದ್ದರೆ ಗುರಿಯನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಸಮಯದ ಮೌಲ್ಯವನ್ನು
ಅರಿತುಕೊಳ್ಳುವುದು ಅತ್ಯಂತ ಮುಖ್ಯವೆಂದು ತಿಳಿಸಿದ ಅವರು ಸಮಯ ಪಾಲನೆ, ಧೈರ್ಯ ಮತ್ತು ಸತತ ಪ್ರಯತ್ನಗಳು ವ್ಯಕ್ತಿತ್ವ ವಿಕಾಸಕ್ಕೆ
ನೆರವಾಗುತ್ತದೆ ಎಂದು ಎಕ್ಸ್ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಖ್ಯಾತ ಮಕ್ಕಳ ವೈದ್ಯೆ ಡಾ. ಅರ್ಪಿತಾ ಎ.ರಂಜನ್ ಸಲಹೆ ನೀಡಿದರು.

ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನ “ 40ನೇ ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಎಕ್ಸ್ಪರ್ಟ್ ಕಾಲೇಜು ತಮಗೆ ನೀಡಿದ ಶಿಸ್ತು , ಆತ್ಮವಿಶ್ವಾಸ ಹಾಗೂ ಮೌಲ್ಯಾಧಾರಿತ ಶಿಕ್ಷಣವೇ ತಮ್ಮ ವೃತ್ತಿ ಜೀವನದ ಬಲವಾದ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮಕ್ಕೆ ಕಾಲೇಜಿನ ಅಧ್ಯಕ್ಷರಾದ ಪ್ರೊ.ನರೇಂದ್ರ ಎಲ್ ನಾಯಕ್ ಅವರು ಅಧ್ಯಕ್ಷತೆವಹಿಸಿ “40ನೇ ಎಕ್ಸ್ಪರ್ಟ್ ಡೆ” ಕಾರ್ಯಕ್ರಮವನ್ನು
ಅಧಿಕೃತವಾಗಿ ಉದ್ಘಾಟಿಸುವ ಮುಖಾಂತರ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆಯಾಗಿರುವ ಡಾ. ಉಷಾಪ್ರಭಾ. ಎನ್.ನಾಯಕ್ ಸಂಸ್ಥೆಯ 40 ವರ್ಷಗಳ ಶೈಕ್ಷಣಿಕ ಪಯಣವನ್ನು ಸ್ಮರಿಸುತ್ತಾ, ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣವೇ ಸಮಾಜದ ಸ್ಥಿರ ಅಭಿವೃದ್ಧಿಗೆ ಮೂಲಸ್ತಂಭ ಎಂದು ಹೇಳಿದರು.

ಸಮಾಜಮುಖಿ ಚಿಂತನೆ , ಶಿಸ್ತಿನ ಜೀವನ ಸ್ಪಷ್ಟವಾದ ಗುರಿಯಿಂದ ಮಾತ್ರ ಸಮಗ್ರ ಯಶಸ್ಸು ಸಾಧ್ಯವೆಂದು ಹೇಳಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರ ಮಹತ್ವದ ಪಾತ್ರವಹಿಸಿದೆ ಎಂದು ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಎಕ್ಸ್ಪರ್ಟ್ ಸಂಸ್ಥೆ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡುವ ವಿಶ್ವಾಸ
ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರಭಟ್‌ ರವರು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ
ಇನ್ನಿತರರು ಉಪಸ್ಥಿತರಿದ್ದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಾದ ಸ್ಮರಾಮಿ ಹಾಗೂ ಧನ್ವಿತ್ ಕಾರ್ಯಕ್ರಮವನ್ನು ನಿರೂಪಿಸಿದರು.

“ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭದ ಬಳಿಕ
ವಿದ್ಯಾರ್ಥಿಗಳಿಗಾಗಿ ಸುಮಾರು 15ಕ್ಕೂ ಹೆಚ್ಚು ಸ್ಪರ್ಧೆಯನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಶೈಕ್ಷಣಿಕ ಸಾಲಿನ ಬಹುಮಾನ ವಿತರಣಾ ಸಮಾರಂಭವು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ಹಿರಿಯ ವಕೀಲರಾದ ಅಮೃತ್ ಕಿಣಿ ಅವರಿಂದ ನೆರವೇರಿತು. ಶೈಕ್ಷಣಿಕ ಸಾಲಿನ ಪಠ್ಯ ಹಾಗೂ ಪಠ್ಯೇತರ
ಚಟುವಟಿಕೆಗಳ ಬಹುಮಾನವನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿ, ಕಾನೂನಿನ ಅರಿವು ಹಾಗೂ ನೈತಿಕ ಜೀವನ ಮೌಲ್ಯಗಳ ಮಹತ್ವವನ್ನು ಅರಿತಿರಬೇಕೆಂದು ಕರೆ ನೀಡಿದರು.

“40ನೇ ಎಕ್ಸ್ಪರ್ಟ್ ಡೆ” -ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ನಿರಂತರ ಕಲಿಕೆ ಮತ್ತು ಮೌಲ್ಯಾಧಾರಿತ ಬದುಕು ಯಶಸ್ಸಿಗೆ ದಾರಿ- ವಸಂತ ಕಾಮತ್
ಸ್ಪಷ್ಟ ಗುರಿ, ಶ್ರಮ ಮತ್ತು ದೀರ್ಘಕಾಲೀನ ದೃಷ್ಟಿಕೋನವೇ ಯಶಸ್ಸಿನ ಮೂಲ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಜೀವನ ಕೌಶಲ್ಯಗಳು, ತಾರ್ಕಿಕಚಿಂತನೆ ಮತ್ತು ಆತ್ಮವಿಶ್ವಾಸವನ್ನು
ಬೆಳೆಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ಅವರು “ವಿಫಲತೆಯನ್ನು ಭಯಪಡುವ ಅಗತ್ಯವಿಲ್ಲ.ಪ್ರತಿಯೊಂದು ವಿಫಲತೆಯೂ ಮುಂದಿನ ಯಶಸ್ಸಿಗೆ ದಾರಿತೋರುವ ಪಾಠವಾಗಬೇಕು” ಎಂದು ಸ್ಮಾಲ್‌ಕೇಸ್ ಸಂಸ್ಥೆಯ ಸಿಇಒ ಹಾಗೂ ಜೆರೋಧಾ ಫಂಡ್ ಹೌಸ್‌ನ ಟ್ರಸ್ಟಿ ನಿರ್ದೇಶಕರಾಗಿರುವ ಶ್ರೀ ವಸಂತ್ ಕಾಮತ್ ಅವರು ಕರೆ
ನೀಡಿದರು.

ಅವರು ಕೊಡಿಯಾಲ್‌ಬೈಲ್ ಎಕ್ಸ್ಪಟ್ ಪದವಿ ಪೂರ್ವ ಕಾಲೇಜಿನ 40ನೇ ಎಕ್ಸ್ಪರ್ಟ್ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಗುರುತಿಸಿ ಹೊಸ ಅವಕಾಶಗಳನ್ನು ಸ್ವೀಕರಿಸುವ ಧೈರ್ಯ ಹೊಂದಬೇಕು. ಶಿಸ್ತು,
ಸಮಯಪಾಲನೆ ಮತ್ತು ಮೌಲ್ಯಾಧಾರಿತ ಬದುಕು ವಿದ್ಯಾರ್ಥಿ
ಜೀವನದ ಅಡಿಪಾಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಅಕಾಡೆಮಿಕ್ ಸಮಿತಿಯ ಸದಸ್ಯರಾದ ಗಣಿತ ಉಪನ್ಯಾಸಕರಾದ ಪೃಥ್ವಿ ಡಿ’ಸೋಜಾ ಅವರು ಎಲ್ಲರನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರಭಟ್ ರವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೊ. ನರೇಂದ್ರ ಎಲ್ ನಾಯಕ್ ಅವರು ವಹಿಸಿದ್ದರು. ಅವರು ಮಾತನಾಡುತ್ತಾ ಯಶಸ್ಸಿನ ಮೂಲ ಮಂತ್ರ ಸ್ವಯಂಶಿಸ್ತು. ವಿದ್ಯಾರ್ಥಿ ಜೀವನವು ಭವಿಷ್ಯದ ಬುನಾದಿಯಾಗಿದ್ದು, ಈ ಹಂತದಲ್ಲಿ
ಸಕಾರಾತ್ಮಕ ಚಿಂತನೆ, ಪರಿಶ್ರಮ ಮತ್ತು ಉತ್ತಮ ನಡವಳಿಕೆಯನ್ನು ಅಳವಡಿಸಿಕೊಂಡರೆ ಯಶಸ್ಸು ಸಹಜವಾಗಿ ದೊರೆಯುತ್ತದೆ. ನಾವು ಪ್ರತಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಸಾಧ್ಯವೆಂಬುದು
ಯಾವುದೂ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಕ್ಸ್ಪರ್ಟ್ ಸಂಸ್ಥೆಯ 40 ವರ್ಷಗಳ ಶೈಕ್ಷಣಿಕ ಪಯಣ ಇದು ಕೇವಲ ವರ್ಷಗಳ ಗಣನೆ ಅಲ್ಲ ಅದು ಮೌಲ್ಯಾಧಾರಿತ ಶಿಕ್ಷಣ, ಶಿಸ್ತು, ಶ್ರದ್ಧೆ ಮತ್ತು ನಿರಂತರ ಸಾಧನೆಯ ಪ್ರತೀಕವಾಗಿದೆ. ಸಾವಿರಾರು ವಿದ್ಯಾರ್ಥಿಗಳ
ಭವಿಷ್ಯ ರೂಪಿಸಿದೆ ಎಂದು ತಿಳಿಸಿದರು.

ಸಾಧನೆಗೆ ಜೀವನದಲ್ಲಿ ಅತ್ಯಂತ ಮುಖ್ಯವಾದುದು ನಿಷ್ಠೆ ಹಾಗೂ ಸಮರ್ಪಣಾ ಮನೋಭಾವ. ಎಕ್ಸ್ಪರ್ಟ್ ಭವಿಷ್ಯದ ನಾಯಕರುಗಳನ್ನು ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳ ಪರಿಶ್ರಮ ಶಿಕ್ಷಕ, ಶಿಕ್ಷಕೇತರರ ನಿಷ್ಠೆ, ಹಾಗೂ
ಪೋಷಕರ ಸಹಕಾರ ಸಂಸ್ಥೆಯ ಯಶಸ್ಸಿನ ಮೂಲ ಕಾರಣಗಳಾಗಿವೆ.

ಮುಂದಿನ ದಿನಗಳಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಕೋನ ನಮ್ಮದಾಗಿದ್ದು, ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಮರ್ಥರನ್ನಾಗಿಸುವ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ
ಉಪಾಧ್ಯಕ್ಷೆ ಡಾ. ಉಷಾಪ್ರಭಾ. ಎನ್.ನಾಯಕ್ ರವರು ತಿಳಿಸಿದರು. ನಾಲ್ಕು ದಶಕಗಳ ಶೈಕ್ಷಣಿಕ ಸೇವೆಯೊಂದಿಗೆ ಎಕ್ಸ್ಪರ್ಟ್ ಸಂಸ್ಥೆ ಸಮಾಜದ ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.

ಇದೇ ವೇಳೆ ಶೈಕ್ಷಣಿಕ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾದ, ನಿಖಿಲ್ ಭೂಷಣ್ ಶ್ರೀನಿವಾಸ್ “ಬೆಸ್ಟ್ ಇನ್ ಸ್ಕೊಲಾಸ್ಟಿಕ್” ಎಂಬ ಪ್ರಶಸ್ತಿಯನ್ನು, ತ್ರಿಶಾ ಎಸ್ “ಬೆಸ್ಟ್ ಇನ್ ನಾನ್ ಸ್ಕೊಲಾಸ್ಟಿಕ್ ಪ್ರಶಸ್ತಿಯನ್ನು, ದೀಕ್ಷಾ ಶೆಣೈ “ಎಕ್ಸ್ಪರ್ಟ್ ಸೂಪರ್ ಸ್ಟಾರ್” ಪ್ರಶಸ್ತಿಯನ್ನು ಪಡೆದಿದ್ದು ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.


ವೇದಿಕೆಯಲ್ಲಿ ಎಕ್ಸ್ಪರ್ಟ್ ಕಾಲೇಜು ವಳಚ್ಚಿಲ್‌ನ ಪ್ರಾಂಶುಪಾಲರಾದ ಎನ್.ಕೆ.ವಿಜಯನ್ ಕರಿಪಲ್, ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶರಣ್ಯ, ನಿಧಿಶ್ರೀ ಸಭಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಆರಂಭಗೊಂಡು ನೃತ್ಯ, ಸಂಗೀತ ಹಾಗೂ ವೈವಿಧ್ಯಮಯವಾದ ಕಲಾತ್ಮಕ
ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮೋಹಕವಾಗಿ ಪ್ರದರ್ಶಿಸಲ್ಪಟ್ಟವು. ಇದು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗನ್ನು ನೀಡಿತು.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ತನವ್ ಗೌಡ, ರಂಜನಾ, ಅದಿತಿ ಪ್ರಭು, ಪ್ರಿಯಾನ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಭರತ್ದ್ ಅವರಿಂದ ಧನ್ಯವಾದ ಕಾರ್ಯಕ್ರಮ ನೆರವೇರಿತು.