ಮಂಗಳೂರು: ಎಂಡೋಸಲ್ಫಾನ್ ಬಾಧಿತ ವಿಶೇಷಚೇತನ ಬಾಲಕಿಯೊಬ್ಬಳು ಶಾಲೆಯಲ್ಲಿ ಮಾಡಿದ ನೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಸಂಚಲನ ಮೂಡಿಸಿದೆ.
ಕೇರಳದ ಕಾಸರಗೋಡು ಜಿಲ್ಲೆ ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತೃಷಾಲಕ್ಷ್ಮೀ ಈಗ ಎಲ್ಲರ ಕಣ್ಮಣಿ. ಈಕೆ ತುಳು ಗೀತೆಗೆ ತನ್ನ ಊನಗೊಂಡ ಪಾದಗಳ ಮೂಲಕ ಇರಿಸಿದ ಹೆಜ್ಜೆ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ. ಮನದೊಳಗಿನ ಕಲೆಯ ಬಗೆಗಿನ ಆಸಕ್ತಿ ಹಾಗೂ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವ ತುಡಿತದಿಂದ ಶಾಲಾ ಕಲೋತ್ಸವದ ವೇದಿಕೆಯೇರಿದ್ದಾಳೆ. ಇದೀಗ ಈಕೆಯ ನೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ.
ಕಡು ಬಡತನ, ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಈಕೆಯ ಎರಡೂ ಕಾಲುಗಳ ಪಾದಗಳು ಊನಗೊಂಡಿದೆ. ತೃಷಾಲಕ್ಷ್ಮಿ ಮೂಲತಃ ಮುಂಡಿತ್ತಡ್ಕ ಸಮೀಪದ ಬೇರಿಕುಂಜೆ ನಿವಾಸಿ ಅಪ್ಪಣ್ಣನಾಯ್ಕ ಹಾಗೂ ಸೀತಾ ದಂಪತಿಯ ಪುತ್ರಿ. ದಿನ ನಿತ್ಯದ ತುತ್ತಿಗೆ ಬವಣೆಪಡುತ್ತಿದ್ದ ಕಡು ಬಡತನದ ಕುಟುಂಬ ಇವರದ್ದು. ವಿಶೇಷಚೇತನರಿಗಿರುವ ನೆರವು ಹೊರತುಪಡಿಸಿ ಸರಕಾರದ ಯಾವುದೇ ಸೌಲಭ್ಯಗಳೂ ಲಭಿಸಿಲ್ಲ. ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರ ಯಾದಿಯಲ್ಲೂ ಈಕೆಯ ಹೆಸರು ಸೇರ್ಪಡೆಯಾಗಿಲ್ಲ.