ಮಂಗಳೂರು: ದ.ಕ. ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ ಮೇಲೆ ನಿರಂತರ ನಿಗಾ ವಹಿಸಿ ಸಾರ್ವಜನಿಕ ಜೀವ ಹಾನಿ ತಪ್ಪಿಸಲು ಪ್ರಯತ್ನಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆಯಲ್ಲಿ ಸೂಚನೆ ರವಾನಿಸಿದ್ದಾರೆ.
ನದಿ ಪಾತ್ರದಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಕೆಲ ಪ್ರದೇಶಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ಅಲ್ಲಿಯೇ ಇದ್ದು, ಪರಿಸ್ಥಿತಿಯನ್ನು ಗಮನಿಸಬೇಕು. ಗಂಜಿ ಕೇಂದ್ರಗಳಲ್ಲಿ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಬೇಕು. ಉತ್ತಮ ಆಹಾರ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಬೇಕು.
ಕುಡಿಯುವ ನೀರು ಸೇರಿದಂತೆ ಯಾವುದೇ ಕೊರತೆಯಾಗದಂತೆ ಎಲ್ಲಾ ಸೌಲಭ್ಯ ಒದಗಿಸಬೇಕು. ಪ್ರತಿ ಮೂರು ಗಂಟೆಗೊಮ್ಮೆ ಈ ಬಗ್ಗೆ ತನಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಹಾನಿಗೊಂಡಿರುವ ರಸ್ತೆಗಳು, ವಿದ್ಯುತ್ ಕಂಬಗಳ ಬಗ್ಗೆ ಶೀಘ್ರವಾಗಿ ಪರಿಶೀಲನೆ ನಡೆಸಿ ಹಾನಿಯ ಅಂದಾಜು ಮಾಡಿ ವರದಿ ನೀಡಬೇಕು.
ಹೆಚ್ಚುವರಿ ಬೋಟುಗಳನ್ನು ದ.ಕ.ಜಿಲ್ಲೆಗೆ ತರಲು ಆದೇಶಿಸಿದ ಅವರು, ಎಲ್ಲಾ ಅಧಿಕಾರಿಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಸೂಚನೆ ನೀಡಿದರು.