ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಸಂಭ್ರಮದ ಆಟಿ ಅಮವಾಸ್ಯೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಗುರುವಾರ ಆಟಿ ಅಮಾವಾಸ್ಯೆ ಸಂಭ್ರಮದಿಂದ ನಡೆಯಿತು.
ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಕಾರಿಂಜ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನಕ್ಕೆ ಮುಂಜಾನೆಯೇ ಸಾವಿರಾರು ಭಕ್ತರು ಆಗಮಿಸಿ ತೀರ್ಥಸ್ನಾನ‌ ಮಾಡಿದರು.
ಮುಂಜಾನೆ 4 ಗಂಟೆಯಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಆಗಮಿಸತೊಡಗಿತು. ಶ್ರೀ ನರಹರಿ ಕ್ಷೇತ್ರದಲ್ಲಿ ಪರ್ವತ ಹತ್ತಿದ ಬಳಿಕವೇ ತೀರ್ಥಸ್ನಾನ ಮಾಡುವ ಅವಕಾಶವಿದ್ದು, ಕಾರಿಂಜ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿದ ಬಳಿಕ ಬೆಟ್ಟ ಹತ್ತಬೇಕಿದೆ.
ಆಟಿ ಆಮಾವಾಸ್ಯೆಯ ದಿನ ಕ್ಷೇತ್ರಗಳ ಸುತ್ತ ಎಲ್ಲಿ ನೋಡಿದರೂ ಭಕ್ತರ ದಂಡೇ ಕಾಣಿಸಿತು. ಮುಂಜಾನೆಯಿಂದ ಮಧ್ಯಾಹ್ನದವರೆಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ವಾಡಿಕೆಯಂತೆ ದ.ಕ. ಜಿಲ್ಲೆಯ ಜನತೆ ಆಟಿ ಅಮಾವಾಸ್ಯೆಯ ದಿನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ಹಗ್ಗಸೇವೆ ಇಲ್ಲಿನ ವಿಶೇಷತೆಯಾಗಿದ್ದು, ಇದರಿಂದ ರೋಗ ರುಜಿನ ದೂರವಾಗುತ್ತದೆ ಎಂಬ ನಂಬಿಕೆ ಇದೆ. ಜತೆಗೆ ನಾಗ ದೇವರಿಗೆ ಆಶ್ಲೇಷ ಪೂಜೆಯೂ ನಡೆಯುತ್ತದೆ. ತೀರ್ಥಸ್ನಾನಗೈದರೆ ಸರ್ವಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇಲ್ಲಿದೆ.