ಮಂಗಳೂರು: ದ.ಕ ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಂಭ್ರಮ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಾಗರ ಪಂಚಮಿಯ ಸಲುವಾಗಿ ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷ ಪೂಜೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ನಾಗಾರಾಧನೆಯ ಪುಣ್ಯ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪ್ರದಾಯದಂತೆ ಆಚರಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು.
ಭಕ್ತರು ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ಭಕ್ತಾದಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ನಾಗರಾಜನಿಗೆ ದೇಗುಲದ ಪುರೋಹಿತರು ಎರೆದರು. ತನುವಿನೊಂದಿಗೆ ಹಿಂಗಾರ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ನಾಗಪ್ರತಿಷ್ಠಾ ಮಂಟಪಕ್ಕೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು‌.
ಗಂಧ ಪ್ರಸಾದದೊಂದಿಗೆ ಹಾಲಿನ ಅಭಿಷೇಕ ಮತ್ತು ವಿಶೇಷವಾಗಿ ನಾಗ ಪ್ರಿಯವಾದ ಅರಿಶಿನ ಪ್ರಸಾದ ಹಾಗೂ ಕಂಡಸಾರಿ ಕೆಂಪು ಕಲ್ಲು ಸಕ್ಕರೆ ಒಳಗೊಂಡ ಪಂಚಕಜ್ಜಾಯವನ್ನು ವಿತರಿಸಲಾಯಿತು.