ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಬಿರುಸಿನ ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಧಾರಾಕಾರವಾಗಿ ಮಳೆ ಸುರಿಯಿತು. ಮುಂಜಾನೆಯಿಂದ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ‌ ಮಂಗಳೂರಿನ ವಿವಿಧೆಡೆ ನೀರು ತುಂಬಿ ಜನರ ಓಡಾಟಕ್ಕೆ ಅಡಚಣೆ ಉಂಟಾಯಿತು.
ಪಾಂಡೇಶ್ವರ ಸಮೀಪದ ಸುಭಾಷ್ ನಗರ ಪ್ರಥಮ ಕ್ರಾಸ್ ಸಂಪೂರ್ಣ ಜಲಾವೃತವಾಗಿತ್ತು. ಹಾಗೆಯೇ ಕೇಂದ್ರ ರೈಲು ನಿಲ್ದಾಣಕ್ಕೆ ಮತ್ತೆ ನೀರು ನುಗ್ಗಿದೆ. ಕೃತಕ ನೆರೆಯಿಂದ ರೈಲು ನಿಲ್ದಾಣದ ಆವರಣ ಕೆರೆಯಂತಾಗಿತ್ತು. ರೈಲು ನಿಲ್ದಾಣಕ್ಕೆ ಆಗಮಿಸುವ, ನಿರ್ಗಮಿಸುವ ಪ್ರಯಾಣಿಕರು ಪರದಾಡುವಂತಾಗಿದೆ.
ನಗರದ ಫಳ್ನೀರ್ ರಸ್ತೆ, ಕೊಟ್ಟಾರ ಚೌಕಿ ಜಲಾವೃತಗೊಂಡಿತು. ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯಲ್ಲೇ ಹರಿಯುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆಗೊಳಗಾಗಿದ್ದಾರೆ.
ಕೊಟ್ಟಾರ ಚೌಕಿಯಲ್ಲಿ ರಾಜ ಕಾಲುವೆ ತುಂಬಿ ಹರಿಯಿತು. ಬಸ್ ಸಹಿತ ಇತರ ವಾಹನಗಳ ಸುಗಮ ಸಂಚಾರಕ್ಕೆ ಮಳೆ, ಕೊಳಚೆ ನೀರು ಅಡ್ಡಿಯಾಗಿ ಪರಿಣಮಿಸಿತು. ಇನ್ನು ಪಡೀಲ್‌ನಲ್ಲಿರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು ಶೇಖರಣೆಗೊಂಡು ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ಅಂಡರ್ ಪಾಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕ್ಕೊಳಗಾದರು. ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಸುಬ್ರಹ್ಮಣ್ಯ, ಬೆಳ್ತಂಗಡಿ, ಮೂಡಬಿದ್ರೆಯ ವಿವಿಧೆಡೆ ಮಧ್ಯಾಹ್ನದವರೆಗೆ ಭರ್ಜರಿ ಮಳೆಯಾಗಿದ್ದು, ಅನಂತರ ಸ್ವಲ್ಪ ಬಿಡುವು ಕಂಡಿದೆ.