ಮಂಗಳೂರು: ಡ್ರಗ್ಸ್ ಸಾಗಾಟದ ಆರೋಪದಡಿ ಬಾಲಿವುಡ್ ನ ಎಬಿಸಿಡಿ ಸಿನಿಮಾದಲ್ಲಿ ಅಭಿನಯಿಸಿದ್ದ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿದ್ದ ಕೆಲ ಪಾರ್ಟಿಗಳಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಕೆಲ ನಟ, ನಟಿ, ಆ್ಯಂಕರ್ ಗಳಿಗೆ ಡ್ರಗ್ಸ್ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಿಶೋರ್ ನನ್ನು ವಿಚಾರಣೆ ನಡೆಸುತ್ತಿದ್ದು, ಕೆಲ ನಟಿಯರ ಹೆಸರು ಬಹಿರಂಗ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈತ ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ನಲ್ಲಿ ಭಾಗವಹಿಸಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದ. ಎಬಿಸಿಡಿ ಚಿತ್ರದಲ್ಲೂ ನಟಿಸಿದ್ದ. ಈತ ನಟ ನಿರ್ದೇಶಕ ಪ್ರಭುದೇವ ಅವರ ಶಿಷ್ಯ ಕೂಡ ಹೌದು.