ಕೊರೊನಾ ವೈರಸ್: ಆತಂಕ‌ ಬೇಡ ಮುಂಜಾಗ್ರತಾ ಕ್ರಮ ವಹಿಸಿ: ಕೋಟ

ಮಂಗಳೂರು: ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ  ಕೊರೋನಾ ವೈರಸ್ ರೋಗ ಹಬ್ಬಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಯಾವುದೇ ಭಯ, ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ತುರ್ತು ಸಭೆ ನಡೆಸಿ, ರಾಜ್ಯದಲ್ಲಿ ಈ ರೋಗದಿಂದ ಬಾಧಿತರಾದ ಯಾವುದೇ ಮಾಹಿತಿ ಇದುವರೆಗೆ ಇಲ್ಲ. ಆದರೂ, ದ.ಕ. ಜಿಲ್ಲೆಯ ಪಕ್ಕದ ಕೇರಳ ರಾಜ್ಯದಲ್ಲಿ ಇದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಯಾವುದೇ ಸಂಶಯ, ಮಾಹಿತಿ‌ ಹಾಗೂ ನೆರವಿಗೆ ಆರೋಗ್ಯ ಇಲಾಖೆಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು. ಜಿಲ್ಲಾಡಳಿತವು ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಜಿಲ್ಲೆಗೆ ಪ್ರಮುಖ ಪ್ರವೇಶ ಸ್ಥಳವಾಗಿರುವ ಏರ್ ಪೋಟ್೯, ರೈಲು ನಿಲ್ದಾಣಗಳಲ್ಲಿ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಚೀನಾದಿಂದ ಮಂಗಳೂರಿಗೆ ನೇರ ವಿಮಾನ ಯಾನ ಇಲ್ಲದೇ ಇರುವುದರಿಂದ ಕೊರೋನಾ ವೈರಸ್ ಹಂಚಿಕೆ ಬಗ್ಗೆ ಆತಂಕವಿಲ್ಲ. ಆದಾಗ್ಯೂ ವಿಶೇಷವಾಗಿ ಕೆಲ ದಿನ ಹಿಂದೆ ಚೀನಾದಿಂದ ಜಿಲ್ಲೆಗೆ ಬಂದ ಇಬ್ಬರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ರೋಗ ಲಕ್ಷಣ ಅವರಲ್ಲಿ ಕಂಡುಬಂದಿರುವುದಿಲ್ಲ ಎಂದು ಅವರು ಹೇಳಿದರು.
ಫೆ. 4 ರಂದು ಎನ್.ಎಂ. ಪಿ.ಟಿ.ಗೆ ವಿದೇಶಿ ಪ್ರವಾಸಿಗರ ಹಡಗು ಬಂದಿದ್ದು, ಇದರಲ್ಲಿ ಬಂದಿದ್ದ ಚೀನಾ ದೇಶದ ಮೂವರು ನಾಗರೀಕರಿಗೆ ಹಡಗಿನಿಂದ ಹೊರಗೆ ಬರಲು ಅವಕಾಶ ನೀಡಿಲ್ಲ ಎಂದು ಸಭೆಗೆ ಎನ್.ಎಂ.ಪಿ.ಟಿ. ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಚಿಕಿತ್ಸೆಗಾಗಿ 10 ವಿಶೇಷ ಹಾಸಿಗೆ ಸಿದ್ಧ‌ತೆಯಲ್ಲಿಡಲಾಗಿದೆ. ದಿನದ 24 ಗಂಟೆಯೂ ಇದರ ನಿರ್ವಹಣೆಗೆ ವೈದ್ಯರಿಗೆ, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಡಾ. ಸತೀಶ್ಚಂದ್ರ ಮಾತನಾಡಿ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಸೀನುವಾಗ ಕರವಸ್ತ್ರ ಹಿಡಿದಿಕೊಳ್ಳುವುದು ಈ ರೋಗ ನಿಯಂತ್ರಣದಲ್ಲಿ ಪ್ರಾಮುಖ್ಯ ವಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಂಧ್ಯಾ, ಡಾ. ನವೀನ್ ಚಂದ್ರ, ಡಾ. ರಾಜೇಶ್, ವಿವಿಧ ಇಲಾಖಾಧಿಕಾರಿಗಳು, ಏರ್ ಪೋಟ್೯, ರೈಲ್ವೇ, ಎನ್.ಎಂ.ಪಿ.ಟಿ. ಅಧಿಕಾರಿಗಳು ಉಪಸ್ಥಿತರಿದ್ದರು.