ಕೊರೊನಾ ಸಂಬಂಧ ಸರಕಾರ ಗೊಂದಲದ ಹೇಳಿಕೆ ನೀಡಬಾರದು: ಖಾದರ್

ಮಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಆದ್ರೆ ಜನರನ್ನು ಗೊಂದಲಕ್ಕೀಡು ಮಾಡುವ ಸಂದೇಶಗಳನ್ನು ನೀಡಬಾರದು ಎಂದು ಮಾಜಿ ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು,  ಸೂಪರ್ ಮಾರ್ಕೆಟ್, ದಿನಸಿ ಅಂಗಡಿ, ಜ್ಯುವೆಲ್ಲರಿಯನ್ನು 24 ಗಂಟೆ ಓಪನ್ ಮಾಡಬಹುದು ಅಂದಿದೆ. ಇದೆಷ್ಟು ಸರಿ..? ಈ ನಿರ್ಧಾರದ ಕುರಿತು ಸರ್ಕಾರ ಪುನರ್ ವಿಮರ್ಶಿಸಬೇಕಾಗಿದೆ ಎಂದರು. ಜನಸಾಮಾನ್ಯರು ಊಟ ಬೇಕಾ..? ವೈರಸ್ ಬೇಕಾ ಎಂದು ಪ್ರಶ್ನಿಸಬೇಕಾಗಿದೆ. ಯಾಕಂದ್ರೆ ನಗರ ಮಟ್ಟದಲ್ಲಿ ಕಾಣಿಸಿಕೊಂಡ ಕೊರೊನಾ ಇಡೀ ದೇಶ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಹೀಗಾಗಿ ಸೂಪರ್ ಮಾರ್ಕೆಟ್ ಗಳಿಗೆ 24 ಗಂಟೆ ಅವಕಾಶ ಕೊಟ್ರೆ ಸೋಶಿಯಲ್ ಡಿಸ್ಟೆನ್ಸ್ ಸಾಧ್ಯನೇ ಇಲ್ಲ. ನಗರವಾಸಿಗಳಿಗಿಂತ ಹಳ್ಳಿ, ಗ್ರಾಮೀಣ ಭಾಗದ ಜನರು ಕಷ್ಟ ಆದರೂ ಲಾಕ್ ಡೌನ್ ಗೆ ಸ್ಪಂದಿಸುತ್ತಿದ್ದಾರೆ ಎಂದರು.
ಇನ್ನು ಸೂಪರ್ ಮಾರ್ಕೆಟ್ ಓಪನ್ ಮಾಡುವುದಾದ್ರೆ ಯಾಕೆ ಕೂಲಿ ಕಾರ್ಮಿಕರು ಮನೆಯಲ್ಲಿರಬೇಕು..? ಕೂಲಿ‌ ಕಾರ್ಮಿಕರಿಗೂ ದುಡಿಯಲು ಅವಕಾಶ ಕೊಡಿ. ಇಂತಹ ವಿಷಮ ಪರಿಸ್ಥಿತಿಯಲ್ಲಿ  ಯಾಕೆ ಇಂದಿರಾ ಕ್ಯಾಂಟೀನನ್ನು ಬಂದ್ ಮಾಡಿಸಿದ್ದೀರಾ..?
ಬಡವರ ಹಸಿವನ್ನು ತಣಿಸುವ ಕೆಲಸ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.  ಇಂತಹವ್ವಿಷಮ ಪರಿಸ್ಥಿತಿಯಲ್ಲೂ ಅಕ್ಕಿಯಂತಹ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಮೊದಲು ಮಾಸ್ಕ್, ಸ್ಯಾನಿಟೈಝರ್ ಬೆಲೆ ಏರಿಕೆಯಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಅಕ್ಕಿ ಬೆಲೆ ಏರಿಕೆಯಾಗಿದೆ. ಯಾಕೆ ರಾಜ್ಯ ಸರ್ಕಾರ‌ ಸುಮ್ಮನೆ ಕೂತಿದೆ..? ರಾಜ್ಯ ಸರ್ಕಾರಕ್ಕೆ ಯಾಕೆ ಬೆಲೆ ಏರಿಕೆಯನ್ನು ನಿಯಂತ್ರಿಸಲಾಗುತ್ತಿಲ್ಲ..? ಕೂಡಲೇ ರಾಜ್ಯ ಸರ್ಕಾರ ಆಹಾರ ಪದಾರ್ಥಗಳ ಬೆಲೆ ನಿಗದಿಪಡಿಸಬೇಕು. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಸರ್ಕಾರ ವಿಶೇಷ ತಂಡ ರಚಿಸಿ ಜಿಲ್ಲೆಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕಾಗಿದೆ ಎಂದರು.