ಕೊರೆನೋ ಭೀತಿ: ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲು ಶಾಸಕ ಕಾಮತ್ ಸೂಚನೆ

ಮಂಗಳೂರು: ಜಗತ್ತನ್ನು ಭೀತಿಗೊಳಿಸಿರುವ ಕೊರೆನೋ ವೈರಸ್ ಹರಡದಂತೆ ಎಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಶಾಸಕ ಕಾಮತ್ ಅವರು ಸೂಚಿಸಿದ್ದಾರೆ.
ಕೇರಳ ರಾಜ್ಯದಿಂದ ಬರುವ ವಾಹನಗಳನ್ನು ತಲಪಾಡಿ ಗಡಿಭಾಗದಲ್ಲಿ ತಪಾಸಣೆ ನಡೆಸಬೇಕು ಹಾಗೂ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ, ಮಂಗಳೂರಿನಲ್ಲಿರುವ ಖಾಸಗಿ ಹಾಗೂ ಸರಕಾರಿ ಬಸ್ ನಿಲ್ದಾಣದಲ್ಲಿ ಕೂಡ ವಿಶೇಷ ಕಟ್ಟೆಚ್ಚರ ವಹಿಸಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಸೂಚನೆ ನೀಡಿದ್ದಾರೆ.
ಈ ವರೆಗೂ ಕೊರೆನಾ ವೈರಸ್ ಕುರಿತು ಮಂಗಳೂರಿನಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದ್ದಾರೆ.
ಜ್ವರ, ನೆಗಡಿ, ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದರೆ ಪಕ್ಕದ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ಹಾಗೂ ಆರೋಗ್ಯದ ಕುರಿತು ನಿರ್ಲಕ್ಷ ವಹಿಸಬಾರದೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುವುದರಿಂದ ಅಲ್ಲಿ ಹೆಲ್ಪ್ ಡೆಸ್ಕ್ ತೆರೆಯುವಂತೆಯೂ ಸಲಹೆ ನೀಡಿದ್ದಾರೆ.
ಕಾಲೇಜು ಆಡಳಿತ ಮಂಡಳಿಗಳಿಗೆ ಮನವಿ:
ಮಂಗಳೂರು ನಗರದಲ್ಲಿರುವ ಎಲ್ಲಾ ಕಾಲೇಜುಗಳಲ್ಲಿ ತಮ್ಮ ಊರಿಗೆ ತೆರಳಿರುವ ಅನ್ಯ ರಾಜ್ಯದ ವಿಧ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಬೇಕು. ಕೊರೆನೋ ವೈರಸ್ ಭೀತಿಯಿಂದ ಕೆಲ‌ ವಿಧ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.