ಮಂಗಳೂರು: ಕೊರೊನಾ ತಡೆಗಟ್ಟಲು ಹೋಂ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಮನೆಯಲ್ಲಿ ಇರಬೇಕು. ಒಂದು ವೇಳೆ ಸುತ್ತಾಡುವುದು ಕಂಡುಬಂದರೆ ಪೊಲೀಸ್ ವಶಕ್ಕೆ ನೀಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಂ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಗೃಹಬಂಧನದಲ್ಲಿದ್ದಂತೆ ಮನೆಯಲ್ಲಿ ಇರಬೇಕು. ಹೊರಗೆ ತಿರುಗಾಡಬಾರದು ಎಂದು ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಸಂಪರ್ಕಿಸುವ 17 ರಸ್ತೆಗಳನ್ನು ಮುಚ್ಚಲಾಗಿದ್ದು, ತುರ್ತು ಅಗತ್ಯವಿದ್ದರೆ ಮಾತ್ರ ತಲಪಾಡಿ ರಸ್ತೆಯಲ್ಲಿ ಬಿಡಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಇತರ ಜಿಲ್ಲೆಗಳಲ್ಲಿ ವಾಹನ ಸಂಖ್ಯೆ ಕಡಿಮೆಗೊಳಿಸುವುದು ಮತ್ತು ಪ್ರಯಾಣಿಕರ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಕಟು ನಿರ್ಧಾರಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಳ್ಳುವ ಪರಿಸ್ಥಿತಿ ಬರಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 89 ಜನರ ಸ್ಯಾಂಪಲ್ ಗಳನ್ನು ಕಳುಹಿಸಿಕೊಡಲಾಗಿದ್ದು, ಅಷ್ಟು ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದರು.