ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದ ‘ಸಸಿಕಾಂತ್ ಸೆಂಥಿಲ್ ದೇಶದ್ರೋಹಿ’ ಎಂದಿದ್ದ ಪುತ್ತೂರು ಶಾಸಕರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಮಠಂದೂರು ಯಾವುದೇ ದಾಖಲೆಯಿಲ್ಲದೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರಿಗೆ ದೂರು ನೀಡಿದ್ದಾರೆ.
ಐಎಎಸ್ ಅಧಿಕಾರಿಗಳು ಸೇವೆ ಸಲ್ಲಿಸುವ ಹಾಗೂ ಇತರ ಅಧಿಕಾರಿಗಳಿಗೆ ಸಾಮಾಜಿಕ ಸ್ಪಂದನೆಗೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ತಂತ್ರ ಇದಾಗಿದೆ. ಅಲ್ಲದೆ, ವ್ಯಕ್ತಿ ಸ್ವಾತಂತ್ರ ಕಸಿದುಕೊಂಡಂತಾಗಿದೆ. ಇದೇ ರೀತಿ ಕಳೆದ ಎರಡು ದಿನಗಳಿಂದ ಶಾಸಕ ಮಠಂದೂರು ನೇತೃತ್ವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಅಸಂಬದ್ಧ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಶಾಸಕರಾದ ಸಂಜೀವ ಮಠಂದೂರು, ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರು, ಕಿಶೋರ್ ಕುಮಾರ್ ರೈ, ಸತೀಶ್ ಪ್ರಭು ವಿರುದ್ಧ ಕೇಸು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.