ಮಂಗಳೂರು: ನಗರ ದಕ್ಷಿಣ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ

ಮಂಗಳೂರು: ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿಯ ನೂತನ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಬಿಜೆಪಿ ಕಚೇರಿಯಲ್ಲಿ ಜರಗಿತು.
ಮಂಗಳೂರು ನಗರ ದಕ್ಷಿಣ ಮಂಡಲದ ಅದ್ಯಕ್ಷರಾಗಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ನೂತನ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಭಾರತದ ಮೂಲೆ ಮೂಲೆಗಳಲ್ಲಿ ತನ್ನ ವಿಚಾರಧಾರೆಯ ಮೂಲಕ ಬಲಗೊಂಡಿದೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಷ್ಟ್ರೀಯವಾದವನ್ನು ಉಸಿರಾಡುವ ರಾಷ್ಟ್ರೀಯವಾದಿ ಪಕ್ಷವಾಗಿ ಜನ ಮನ್ನಣೆ ಗಳಿಸಿದೆ. ದೀನದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿಬಂದ ಪಕ್ಷವು ಇಂದು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂಬುದು ನಮ್ಮ ಹೆಮ್ಮೆ. ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಬಿಜೆಪಿಗೆ ಬಲ ತುಂಬಿದವರು ಕಾರ್ಯಕರ್ತರು. ನನ್ನ ಅವಧಿಯಲ್ಲಿ ನನ್ನೊಂದಿಗೆ ಹೆಗಲುಕೊಟ್ಟು ನಿಂತ ಪ್ರತಿಯೊಬ್ಬ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೆಯೇ ಪ್ರಸ್ತುತ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯ್ ಕುಮಾರ್ ಅವರೊಂದಿಗೆ ನಾವೆಲ್ಲರೂ ಜೊತೆಯಾಗಿ ನಿಂತು ಪಕ್ಷವನ್ನು ಬಲಪಡಿಸೋಣ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ಮಂಗಳೂರು ನಗರ ದಕ್ಷಿಣ ಮಂಡಲವು ಪಕ್ಷ ಸಂಘಟನೆಯಲ್ಲಿ ಅಗ್ರಶ್ರೇಣಿಗೇರಲು ಸಂಘಟನಾ ತಂಡದ ಶ್ರಮ ಮಹತ್ವದ್ದಾಗಿದೆ. ಮಂಡಲ ಅದ್ಯಕ್ಷರಾಗಿದ್ದ ವೇದವ್ಯಾಸ್ ಕಾಮತ್ ಅವರ ಸಂಘಟನಾ ನೈಪುಣ್ಯತೆ ಹಾಗೂ ಕಾರ್ಯದರ್ಶಿಗಳ ಸಂಘಟನಾ ಸಾಮರ್ಥ್ಯವು ಮುಂದಿನ ಮಂಡಲ‌ ಸಮಿತಿಗೆ ಆದರ್ಶಪ್ರಾಯವಾಗಲಿ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಅವರು ಭಾರತೀಯ ಜನತಾ ಪಾರ್ಟಿಯು ಯುವ ನಾಯಕತ್ವದಲ್ಲಿ ಬೆಳೆಯುವ ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವಾಗಿದೆ. ಜನ ಸಂಘದಿಂದ ಇಂದಿನ ವರೆಗೆ ಪಕ್ಷದ ಚಟುವಟಿಕೆಗಳು ಬಹಳಷ್ಟು ವಿಸ್ತಾರಗೊಂಡಿದೆ.‌ ಮುಂದೆಯೂ ಕೂಡ ಪಕ್ಷ ಸಂಘಟನೆಗೆ ಶ್ರಮಿಸೋಣ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪ್ರಭಾ ಮಾಲಿನಿ, ಜಿಲ್ಲಾ ಖಜಾಂಜಿ ಸಂಜಯ್ ಪ್ರಭು, ಮಂಡಲ‌ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ರವೀಂದ್ರ ಕುಮಾರ್, ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.