ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿಗಾಗಿ ಬೃಹತ್ ಸಮಾವೇಶ: ಲಕ್ಷಕ್ಕೂ ಅಧಿಕ ಮಂದಿ ಭಾಗಿ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬೃಹತ್ ಜನಜಾಗೃತಿ ಸಮಾವೇಶ ಮಂಗಳೂರಿನ ಕೂಳೂರಿನಲ್ಲಿ ಸೋಮವಾರ ಸಂಜೆ ನಡೆಯಿತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅವರು ಸಮಾವೇಶದಲ್ಲಿ ಭಾಗವಹಿಸಿ, ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಪ್ರಧಾನ ಭಾಷಣ ಮಾಡಿದರು. ಪೌರತ್ವ ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ಸೇರಿ ಅಲ್ಪಸಂಖ್ಯಾತರಿಗೆ ತೊಂದರೆ ಇಲ್ಲ. ಯಾವುದೇ ತೊಂದರೆ ಆಗದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರಿಗೆ ರಕ್ಷಣೆ ನೀಡುತ್ತದೆ ಎಂದು ಅವರು ಅಭಯ ನೀಡಿದರು.
ಕಾರ್ಯಕರ್ತರು ಜಾಗೃತಿ ಮೂಡಿಸಿ:
ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಜನಜಾಗೃತಿ ಮೂಡಿಸಬೇಕು. ಸಿಎಎ ಕಾಯ್ದೆಯ ಕುರಿತಂತೆ ಕಾಂಗ್ರೆಸ್ ಗೊಂದಲದ ವಾತಾವರಣವನ್ನು ನಿರ್ಮಿಸಿದ್ದು, ಯಾವುದೇ ವಿಪಕ್ಷಗಳು ತಮ್ಮ ಪಕ್ಷ ಧರ್ಮವನ್ನು ನಿಭಾಯಿಸುವುದಕ್ಕಾಗಿ ರಾಷ್ಟ್ರ ಧರ್ಮವನ್ನು ಮರೆಯಬಾರದು ಎಂದರು.
ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮರಿಗೆ ಯಾಕೆ ಪೌರತ್ವ ನೀಡುವುದಿಲ್ಲ ಎಂದು ಕೇಳಲಾಗುತ್ತಿದೆ. ಅದಕ್ಕೆ ಕಾರಣ ಅದು ಜಾತ್ಯತೀತ ರಾಷ್ಟ್ರಗಳಲ್ಲ. ಅವುಗಳು ಮುಸ್ಲಿಂ ಧರ್ಮವನ್ನು ಪಾಲಿಸುವ ರಾಷ್ಟ್ರಗಳು. ಹಾಗಾಗಿ ಅಲ್ಲಿ ಮುಸ್ಲಿಮರಿಗೆ ದೌರ್ಜನ್ಯ ಆಗಲು ಸಾಧ್ಯವಿಲ್ಲ. ಹಾಗಿದ್ದರೂ ಅಲ್ಲಿಂದ ವೀಸಾ ಹೊಂದಿರುವ ಮುಸ್ಲಿಮರಿಗೂ ಪೌರತ್ವ ಸಿಗಲಿದೆ. ಕಳೆದ ಆರು ವರ್ಷಗಳಲ್ಲಿ 600 ಮಂದಿ ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ. ನಾನು ಗೃಹ ಸಚಿವನಾಗಿದ್ದಾಗ ಅದ್ನಾನ್ ಸಾಮಿಗೆ ಪೌರತ್ವ ನೀಡಿರುವುದು ಎಂದು ರಾಜನಾಥ್ ಸಿಂಗ್ ಉಲ್ಲೇಖಿಸಿದರು.
ಕೇಸರಿಮಯ ಮಂಗಳೂರು:
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಗಾಗಲೇ ಮಂಗಳೂರಿನಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದು, ಅವೆದಲ್ಲದಕ್ಕೂ ಠಕ್ಕರ್ ಕೊಡುವ ರೀತಿಯಲ್ಲಿತ್ತು ಈ ಸಮಾವೇಶ. ಕರಾವಳಿಯ ವಿವಿಧ ಭಾಗಗಳ ಜನತೆ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಹಲವು ಭಾಗಗಳಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಹೀಗಾಗಿ ಇಡೀ ಮಂಗಳೂರು ಇಂದು ಕೇಸರಿಮಯವಾಗಿತ್ತು.
ಬೃಹತ್ ಸಮಾವೇಶದ ವೇದಿಕೆಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷರಾದ ಸುದರ್ಶನ್, ಮಟ್ಟಾರ್ ರತ್ನಾಕರ ಹೆಗ್ಡೆ, ಕರಾವಳಿ ಭಾಗದ ಶಾಸಕರು ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.