ಫೆ.2 ರಂದು ಮಡಂತ್ಯಾರಿನಲ್ಲಿ ಕೆಥೋಲಿಕ್ ಮಹಾ ಸಮಾವೇಶ:

ಮಂಗಳೂರು: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ನೇತೃತ್ವದಲ್ಲಿ ಭಾರತೀಯ ಕೆಥೋಲಿಕ್ ಯುವ ಸಂಚಾಲನ ಮತ್ತು ಕೆಥೋಲಿಕ್ ಮಹಿಳಾ ಮಂಡಳಿಯ ಸಹಯೋಗದಲ್ಲಿ ಮಂಗಳೂರು, ಬೆಳ್ತಂಗಡಿ ಹಾಗೂ ಪುತ್ತೂರು ಧರ್ಮಪ್ರಾಂತಗಳ ಕೆಥೋಲಿಕ್ ಮಹಾ ಸಮಾವೇಶ – 2020 ಫೆ. 2ರಂದು ಮಡಂತ್ಯಾರು ಚರ್ಚ್ ಮೈದಾನದಲ್ಲಿ ನಡೆಯಲಿದೆ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ’ಕೋಸ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮಡಂತ್ಯಾರು ಪೇಟೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪುತ್ತೂರು ಬಿಷಪ್ ರೈ| ರೆ| ಡಾ|  ಗೀವರ್ಗೀಸ್ ಮಾರ್ ಮಕಾರಿಯೊಸ್ ಆಶೀರ್ವಚನ ನೀಡುವರು. ಬೆಳ್ತಂಗಡಿ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಝಿ ದಿಕ್ಸೂಚಿ ಭಾಷಣ ಮಾಡುವರು. ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ, ಕೆಪಿಎಸ್ ಸಿ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್, ಮಂಗಳೂರು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಮತ್ತು ಲೀಡಿಯಾ ಲೋಬೊ ವಿಚಾರ ಮಂಡಿಸುವರು.
ಸಮಾವೇಶದಲ್ಲಿ ಮೂರು ಧರ್ಮ ಪ್ರಾಂತಗಳ 30000 ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕೆಥೋಲಿಕ್ ಕ್ರೈಸ್ತರ ಏಕತೆ ಮತ್ತು ಒಗ್ಗಟ್ಟನ್ನು ಬಲಪಡಿಸುವುದು, ಸಮುದಾಯದ ಏಳಿಗೆಗೆ ಯೋಜನೆ ರೂಪಿಸುವುದು ಹಾಗೂ ಸರಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಹಕ್ಕೊತ್ತಾಯ ಮಂಡಿಸುವುದು ಸಮಾವೇಶದ ಉದ್ದೇಶ ಎಂದು ಪಾವ್ಲ್ ರೋಲ್ಫಿಡಿ’ಕೋಸ್ತಾ ವಿವರಿಸಿದರು.
ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 1.3 ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ. 2.87ರಷ್ಟು ಇರುವ ಕೆಥೋಲಿಕರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲು ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಯುವಜನರು ಮಾದಕ ದ್ರವ್ಯಕ್ಕೆ ಬಲಿಯಾಗುವುದು, ಸಮಾಜಘಾತುಕ ಕೃತ್ಯಗಳಿಗೆ ಮುಂದಾಗುವುದು, ಅಪಾಯಕಾರಿ ಮೊಬೈಲ್ ಆಟಗಳಲ್ಲಿ ಕಾಲ ಕಳೆಯುವ ಮೂಲಕ ಮನೆಮಂದಿ ಹಾಗೂ ಸಮಾಜದ ಜತೆಗಿನ ಸಂಬಂಧ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಗೆ ಒಳಗಾಗದಂತೆ ಜಾಗೃತಿ ಮೂಡಿಸಿ ಅವರ ಭವಿಷ್ಯ ರೂಪಿಸಲು ನೆರವಾಗುವುದು ಸಮಾವೇಶದ ಉದ್ದೇಶ ಎಂದು ತಿಳಿಸಿದರು.
ಸಮಾವೇಶದಲ್ಲಿ ಮಂಗಳೂರು ಧರ್ಮಪ್ರಾಂತದ 124 ಚರ್ಚ್ ಗಳ ಎಲ್ಲ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಾಗುವುದು ಎಂದರು.
ಮಹಾ ಸಮಾವೇಶ ಸಮಿತಿಯ ಸಂಚಾಲಕ ಜೋಯಲ್ ಮೆಂಡೊನ್ಸಾ, ಫಾ| ಮ್ಯಾಥ್ಯೂ ವಾಸ್, ಫಾ| ರೊನಾಲ್ಡ್ ಡಿ’ಸೋಜಾ ಫಾ| ಫ್ರಾನ್ಸಿಸ್ ಡಿ’ಸೋಜಾ, ಫಾ| ಸ್ಟ್ಯಾನಿ ಪಿಂಟೊ, ಟೆರಿ ಪಾಯ್ಸ್, ಲಿಯೋನ್ ಸಲ್ಡಾನ್ಹಾ, ಲ್ಯಾನ್ಸಿ ಡಿ’ಕುನ್ಹಾ, ಎಲ್.ಜೆ‌ ಫೆರ್ನಾಂಡಿಸ್, ಇ. ಫೆರ್ನಾಂಡಿಸ್ ಗೋಷ್ಠಿಯಲ್ಲಿದ್ದರು.