ಮಂಗಳೂರು: ಮಂಗಳೂರಿನ ನೀರುಮಾರ್ಗದ ಬೈತುರ್ಲಿ ಎಂಬಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ 6 ಕೋ.ರೂ. ಅನುದಾನ ಮಂಜೂರಾತಿ ಮಾಡಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು
ಮಂಗಳೂರಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಬ್ಯಾರಿ ಭವನ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆಯಿಡಲಾಗುತ್ತಿತ್ತು. ಆದರೆ ಬ್ಯಾರಿ ಭವನದ ಬೇಡಿಕೆಯನ್ನು ಯಾವ ಸರ್ಕಾರವೂ ಈಡೇರಿಸಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರು ಆರು ಕೋಟಿ ನೀಡಲು ಒಪ್ಪಿಗೆ ಸೂಚಿಸಿದ್ದು, ಪ್ರಸಕ್ತ ಸಾಲಿನಲ್ಲಿ ಮೂರು ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಬ್ಯಾರಿ ಭವನದಲ್ಲಿ ಅಧ್ಯಕ್ಷ, ರಿಜಿಸ್ಟ್ರಾರ್ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಕಚೇರಿ, ಮೀಟಿಂಗ್ ಹಾಲ್, ಸುಸಜ್ಜಿತ ಸಭಾಭವನ, ಗ್ರಂಥಾಲಯಗಳು ಇರಲಿವೆ. ಇನ್ನೂ ಎಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಿರ್ಧರಿಸಲಾಗಿದೆ ಎಂದರು.












