udupixpress
Home Trending ಮಂಗಳೂರು: ಬೀಡಿ ಉದ್ಯಮ ಸೋಮವಾರದಿಂದಲೇ ಪ್ರಾರಂಭ: ಸಚಿವ‌  ಕೋಟ

ಮಂಗಳೂರು: ಬೀಡಿ ಉದ್ಯಮ ಸೋಮವಾರದಿಂದಲೇ ಪ್ರಾರಂಭ: ಸಚಿವ‌  ಕೋಟ

ಮಂಗಳೂರು: ಅವಿಭಜಿತ ದಕ್ಷಿಣ ‌ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ 1.90 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 21 ಸಾವಿರದಷ್ಟು ಬೀಡಿ ಕಾರ್ಮಿಕರಿದ್ದಾರೆ. ಕೋರೋನಾ ಹಿನ್ನೆಲೆಯಲ್ಲಿ ಬೀಡಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದು, ಬಡವರ ಜೀವನಾಧಾರಕ್ಕೆ ಸಮಸ್ಯೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಸೋಮವಾರದಿಂದಲೇ ಬೀಡಿ ಉದ್ಯಮ ಪುನರಾರಂಭಗೊಳ್ಳಲಿದೆ. ಕಾರ್ಮಿಕರಿಗೆ ಶೇಕಡಾ 50ರಷ್ಟು ಕೆಲಸ ನೀಡಲು ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಬೀಡಿ ಕಾರ್ಮಿಕರಿಗೆ ಪ್ರತೀ ವರ್ಷ ಅಷ್ಟಮಿ ಅಥವಾ ಚೌತಿ ಸಂದರ್ಭ ಬೋನಸ್ ನೀಡಲಾಗುತ್ತಿದೆ. ಈ ಸಲ ಇದನ್ನು ಸ್ವಲ್ಪ ಬೇಗನೇ ನೀಡುವಂತೆ ಮಾಲೀಕರನ್ನು ಕೋರಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಮಾಲೀಕರು ತಿಳಿಸಿದ್ದಾರೆ ಎಂದು ಸಚಿವ ಕೋಟ ತಿಳಿಸಿದರು. 15 ದಿನ ಬಿಟ್ಟು ಮತ್ತೆ ಸಭೆ ಸೇರಿ ಬೀಡಿ ಉದ್ಯಮ ಪ್ರಗತಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.
ವಲಸೆ ಕಾರ್ಮಿಕರಿಗೆ ಊಟ:
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಪ್ರದೇಶಗಳಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ, ಭಿಕ್ಷಕುಕರಿಗೆ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಊಟ ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ‌ ತಿಳಿಸಿದ ಅವರು,
ಈ ನಿಟ್ಟಿನಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳು, ತಮ್ಮ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರು, ನಿರ್ಗತಿಕರನ್ನು ಗುರುತಿಸಿ ಅವರಿಗೆ ಊಟ, ತಿಂಡಿ ಒದಗಿಸಬೇಕು. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರವನ್ನು ಅಗತ್ಯಬಿದ್ದಲ್ಲಿ ಪಡೆಯುವಂತೆ ಸಚಿವರು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರ ಮೂಲಕ ಆಯಾ ಪಟ್ಟಣ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿ, ಪ್ರತೀ ಮನೆಯ ಸದಸ್ಯರ ಆರೋಗ್ಯ ಮಾಹಿತಿ ಪಡೆದು 10 ದಿನಗಳೊಳಗೆ ವರದಿ ಸಿದ್ಧಗೊಳಿಸುವಂತೆ ಸಚಿವರು ಸೂಚಿಸಿದರು.
ಕಟ್ಟಡ ಕಾರ್ಮಿಕರ ಖಾತೆಗೆ ರೂ. 2000 ಜಮಾ
ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರಕಾರದಿಂದ ರೂ. 2000 ನೆರವು ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 6122 ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಮೊದಲ ಹಂತದಲ್ಲಿ ಜಮಾ ಮಾಡಲಾಗಿದೆ ಎಂದರು.
ಕೋರೋನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ನಿಧಿಯಿಂದ ಈ ಮೊತ್ತ ನೀಡಲಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 6122 ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದವರಿಗೆ ಶೀಘ್ರದಲ್ಲೇ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
error: Content is protected !!