ಮಂಗಳೂರು: ಮಂಗಳೂರು ಮೂಲದ ಕನ್ನಡದ ಪ್ರಸಿದ್ಧ ನಿರೂಪಕಿ ಕಂ ನಟಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಳು ಎಂಬ ಸ್ಫೋಟಕ ಮಾಹಿತಿಯನ್ನು ಡ್ರಗ್ಸ್ ಪೆಡ್ಲರ್, ಡ್ರಾನ್ಸರ್ ಕಿಶೋರ್ ಶೆಟ್ಟಿ ಸಿಸಿಬಿ ವಿಚಾರಣೆಯಲ್ಲಿ ಬಹಿರಂಗಗೊಳಿಸಿದ್ದಾನೆ.
ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಪೊಲೀಸರು ಆ ನಿರೂಪಕಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆಕೆಗೂ ಸದ್ಯದಲ್ಲೇ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಟಿ ಹಾಗೂ ತನಗೆ ಇರುವ ನಂಟಿನ ಬಗ್ಗೆ ಪೊಲೀಸರ ಬಳಿ ಕಿಶೋರ್ ತಿಳಿಸಿದ್ದು, ಆಕೆ ಮಂಗಳೂರು ಮೂಲದ ಆ್ಯಂಕರ್ ಎಂದು ಹೇಳಿದ್ದಾನೆ. ಅಲ್ಲದೆ ಆಕೆ ಕನ್ನಡದ ಕೆಲ ಸಿನಿಮಾಗಳಲ್ಲಿ ಸಹನಟಿ ಆಗಿ ನಟಿಸಿದ್ದಳು. ಕನ್ನಡದ ನಂ ಒನ್ ಚಾನೆಲ್ ವೊಂದರಲ್ಲಿ ಪ್ರಸಾರಗೊಳ್ಳುವ ರಿಯಾಲಿಟಿ ಶೋ ನಲ್ಲಿ ಈಕೆ ಆ್ಯಂಕರಿಂಗ್ ಮಾಡುತ್ತಿದ್ದಾಳೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.
ಐದು ವರ್ಷದಿಂದ ಲಿಂಕ್:
ಡ್ಯಾನ್ಸರ್ ಕಿಶೋರ್ ಶೆಟ್ಟಿಗೂ ನಿರೂಪಕಿ ಕಂ ಸಹನಟಿಗೆ ಕಳೆದ ಐದು ವರ್ಷಗಳಿಂದ ಲಿಂಕ್ ಇದೆ ಎಂದು ತಿಳಿದುಬಂದಿದೆ. ಇವರಿಬ್ಬರೂ ಮಂಗಳೂರು ಹಾಗೂ ಮುಂಬೈನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು . ಪಾರ್ಟಿ ಗಳಲ್ಲಿ ಕಿಶೋರ್ ಹುಡುಗಿಯರಿಗೆ ಡ್ರಗ್ಸ್ ನೀಡುತ್ತಿದ್ದ ಎನ್ನಲಾಗಿದೆ.
ಕಿಶೋರ್ ಮುಂಬೈನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದು, ಮಂಗಳೂರಿನಲ್ಲಿ ಪಾರ್ಟಿಗಳನ್ನು ನಡೆಸಿ ಮಂಗಳೂರು ಮೂಲದ ನಟ ನಟಿಯರಿಗೆ ಆಹ್ವಾನ ಕೊಡುತ್ತಿದ್ದ. ಅಲ್ಲದೆ ಈತನಿಗೆ ಹಲವು ಮಂಗಳೂರಿನ ನಟ ನಟಿಯರೊಂದಿಗೆ ಸಂಪರ್ಕ ಇತ್ತು ಎಂಬ ವಿಚಾರವೂ ವಿಚಾರಣೆಯಲ್ಲಿ ತಿಳಿದುಬಂದಿದೆ.