ಮಂಗಳೂರು: ಭಾಗವತ ಪಟ್ಲ ಸತೀಶ್ ಶೆಟ್ಟರಿಗೆ ಸೃಷ್ಟಿ ಕಲಾಭೂಷಣ

ಮಂಗಳೂರು: ಮೇರು ಭಾಗವತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರನ್ನು ಸೃಷ್ಟಿ ಕಲಾ ವಿದ್ಯಾಲಯ ಕೊಡಮಾಡುವ ಸೃಷ್ಟಿ ಕಲಾಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಭಾಗವತಿಕೆ ಮೂಲಕ ಯಕ್ಷ ರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಅದೇ ರೀತಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಕ ಅಶಕ್ತ ಕಲಾವಿದರ ಶ್ರೇಯೋಭಿವೃದ್ಧಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಟ್ಲ ಸತೀಶ ಶೆಟ್ಟಿ ಅವರ ಸಮಾಜ ಮುಖಿ ಸೇವೆಯನ್ನು ಪರಿಗಣಿಸಿ, ಫೆ.2ರಂದು ಬೆಂಗಳೂರಿನ ಸೃಷ್ಟಿ ಕಲಾವಿದ್ಯಾಲಯ ದಶಮಾನದ ಹಬ್ಬದ ಸಂದರ್ಭದಲ್ಲಿ ಜೆ.ಪಿ. ನಗರದ ಆರ್.ವಿ.ದಂತ ಮಹಾವಿದ್ಯಾಲಯ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸೃಷ್ಟಿ ಕಲಾ ವಿದ್ಯಾಲಯ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಾ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಂಡು ಕಲಾದೇವಿಯನ್ನು ಆರಾಧಿಸುತ್ತಿರುವ ಕಲಾವಿದರಿಗೆ ಸೃಷ್ಟಿ ಕಲಾಭೂಷಣ ಹಾಗೂ ಸೃಷ್ಟಿ ಕಲೋಪಾಸಕ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಗುತ್ತದೆ.
ದೊಡ್ಢೇ ರಂಗೇಗೌಡ, ವಿದ್ಯಾಭೂಷಣ, ರಮೇಶ್ಚಂದ್ರ, ಅರ್ಚನಾ ಉಡುಪ ಮುಂತಾದ ಮಹನೀಯರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಬಾರಿ ಸೃಷ್ಟಿ ಕಲಾಬಂಧು ಪ್ರಶಸ್ತಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಶ್ರೀಕಾಂತ್ ರಾವ್ ಜೆ. ಅವರಿಗೆ ನೀಡಲಾಗುವುದು. ಜಾದೂಗಾರ್ ಪ್ರಹ್ಲಾದ್ ಆಚಾರ್ಯ ಅವರಿಗೆ ಸೃಷ್ಟಿ ಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ದಶಮಾನ ಹಬ್ಬದಲ್ಲಿ ಯಕ್ಷಗಾನ, ಕಥಕ್ ನೃತ್ಯ, ಕಲರಿಯಪಟ್ಟು, ಶಾಡೋ ಪ್ಲೇ, ಡೊಳ್ಳು ಕುಣಿತ, ಕರ್ನಾಟಕ ಸಂಗೀತ ನಡೆಯಲಿದೆ.
ದಶಮಾನ ಹಬ್ಬದ ಪ್ರಯುಕ್ತ ಸಂಗೀತ ಹಬ್ಬ, ವಾದನ ಹಬ್ಬ, ಭರತ ನಾಟ್ಯ ಹಬ್ಬ, ಚಿತ್ರಕಲಾ ಹಬ್ಬ ನಗೆ ಹಬ್ಬ, ಯಕ್ಷಗಾನ ಹಬ್ಬ, ಸಿನಿಮೀ ನೃತ್ಯ ಹಬ್ಬ, ಸನ್ಮಾನ ಹಬ್ಬ, ಜಾನಪದ ಹಬ್ಬ, ಕಲಾ ಸಂಗಮ ಹಬ್ಬ ನಡೆಯಲಿದೆ.
ಸ್ನೇಹಜ್ಯೋತಿ ಅನಾಥಾಶ್ರಮ, ಶ್ರೀಶಂಕರಾಚಾರ್ಯ ವಿದ್ಯಾ ಪೀಠ ಆಶ್ರಮದ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ಮತ್ತು ವೇದಿಕೆ ಕಲ್ಪಿಸುವ ಮೂಲಕ ಅವರಿಗೆ ನೈತಿಕ ಮತ್ತು  ಆರ್ಥಿಕ ಬೆಂಬಲ ನೀಡುತ್ತಿದ್ದೇವೆ.
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಸಾವಿರ ಗಿಡ ನೆಡುವ ಮೂಲಕ ಪರಿಸರ ಕಾಳಜಿ, ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಶ್ರೀಲೋಕಾಭಿರಾಮ ವ್ಯವಸ್ಥಾಪಕ ಸಂಪಾದಕ ಶಂಕರಮೂರ್ತಿ ಕಾಯರಬೆಟ್ಟು ಇದ್ದರು.