ಮಂಗಳೂರು: ಬೆಂಗಳೂರಿನ ಸಾದಿಕ್ ನಗರದಲ್ಲಿ ಕೋವಿಡ್ ೧೯ ತಪಾಸಣೆಗಾಗಿ ಹೊರಡಿದ ಆಶಾಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
ಆಶಾ ಕಾರ್ಯಕರ್ತರು ಜನರ ಹಿತಾಸಕ್ತಿಗಾಗಿ ದುಡಿಯುವ ಮಹಿಳೆಯರು. ಎಂದಿಗೂ ಜನರ ಹಿತಾಸಕ್ತಿಗೆ ನೋವುಂಟು ಮಾಡುವ ಕೆಲಸ ಆಶಾ ಕಾರ್ಯಕರ್ತರದ್ದಲ್ಲ. ಅವರು ನಮ್ಮ ಕುಟುಂಬದ ಒಳಿತಿಗಾಗಿ ಬಂದು ಆರೋಗ್ಯದ ಕುರಿತು ಮಾಹಿತಿ ಕೇಳಿದರೆ ಅವರಿಗೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೊರೊನಾ ವೈರಸ್ ಜಾತಿ, ಮತ, ದೇಶ, ಗಡಿ, ಭಾಷೆ, ರಾಜ್ಯ, ಶ್ರೀಮಂತ, ಬಡವ, ಶಿಕ್ಷಿತರು, ಅಶಿಕ್ಷಿತರು ಎಂಬುವುದು ನೋಡದೆ ಎಲ್ಲರಲ್ಲೂ ಹರಡುವ ಅಪಯಾಕಾರಿ ಸೋಂಕು. ನಾವೆಲ್ಲರೂ ಒಗ್ಗಟ್ಟಿನಿಂದ ವೈರಸ್ ಮುಕ್ತಿಗಾಗಿ ಹೋರಾಡಲೆ ಬೇಕು. ವೈರಸ್ ಎಲ್ಲಿಂದ ಹೇಗೆ ಬಂತು ಎಂದು ಪರಸ್ಪರ ಕಿತ್ತಾಡುವ ಬದಲು ಎಲ್ಲರೂ ಎಲ್ಲರಿಗೂ ಎಲ್ಲ ವಿಷಯದಲ್ಲಿ ಸಹಕಾರ ನೀಡಿದರೆ ಇದರ ನಿರ್ಮೂಲನೆ ಮಾಡಲು ಸಾಧ್ಯ. ತಪಾಸಣೆಗೆ ಬರುವ ಎಲ್ಲಾ ವೈದ್ಯರು, ನರ್ಸ್ ಹಾಗೂ ಆಶಾಕಾರ್ಯಕರ್ತರಿಗೆ ಸಹಕಾರ ನೀಡಲೇಬೇಕು ಎಂದಿದ್ದಾರೆ.