ಮಂಗಳೂರು: ಅಪಹರಣಕ್ಕೀಡಾಗಿದ್ದ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಹಾರಿಸ್ ಗುರುವಾರ ಪತ್ತೆಯಾಗಿದ್ದಾನೆ.
ಈತ ಜು. 22ರಂದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿಯ ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ.
ಅಪಹರಣಕಾರರು ಹಾರಿಸ್ ನನ್ನು ಮಂಗಳೂರಿನ ಬಸ್ ನಿಲ್ದಾಣದಲ್ಲಿ ತೊರೆದು ಹೋಗಿದ್ದರು. ವಿಷ್ಯ ತಿಳಿದ ಮಂಜೇಶ್ವರ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
ಆನಂತರ ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಜು. 22ರಂದು ಬೆಳಗ್ಗೆ 7:30ರ ಸುಮಾರಿಗೆ ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಹಾರಿಸ್ನನ್ನು ಕಾರೊಂದರಲ್ಲಿ ಬಂದ ತಂಡ ಕೊಳಿಯೂರು ಪದವಿನಲ್ಲಿರುವ ಆಡಿಟೋರಿಯಂ ಬಳಿ ಅಡ್ಡಗಟ್ಟಿ ಆತನನ್ನು ಅಪಹರಿಸಿತ್ತು.
ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಮಂಜೇಶ್ವರ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದರು.
ಪ್ರಕರಣದ ತನಿಖೆಯನ್ನು ಮಂಜೇಶ್ವರ ಸಿ.ಐ. ದಿನೇಶನ್ ನೇತೃತ್ವದ ಪೊಲೀಸರು ಕೈಗೆತ್ತಿಕೊಂಡಿದ್ದರು. ಇದೀಗ ವಿದ್ಯಾರ್ಥಿ ಪತ್ತೆಯಾಗಿದ್ದು, ಪ್ರಕರಣದ ಹಿಂದಿನ ರಹಸ್ಯ ಇನ್ನಷ್ಟೇ ತಿಳಿದುಬರಬೇಕಿದೆ.