ಮಂಗಳೂರು: ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರದಿಂದ ಪೂರ್ಣ ಪ್ರಮಾಣದ ಸಹಕಾರ ಒದಗಿಸುವುದಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಎಕ್ಕೂರು ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಕೆಲವು ಸ್ಥಳಗಳನ್ನು ಗುರುತಿಸಿದ್ದು ನೂತನ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಗುವುದು ಎಂದರು. ಈಗಾಗಲೇ ಬೆಂಗ್ರೆ ಪ್ರದೇಶ ಸೇರಿದಂತೆ ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು ಇನ್ನಷ್ಟು ಅಂಗವನಾಡಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.
ಗರ್ಭಿಣಿ ಸ್ತ್ರೀಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಕೊಡಮಾಡುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ವ್ಯವಸ್ಥಿತವಾಗಿ ನೀಡಬೇಕು. ಅಂಗನವಾಡಿಯ ಮಕ್ಕಳ ಆಹಾರದ ಗುಣಮಟ್ಟವನ್ನೂ ಏರಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಪಿ, ಓಂಕಾರ ಶಾಖೆ ಇದರ ಅಧ್ಯಕ್ಷ ಭರತ್ ಶೆಟ್ಟಿ, ನಂದಾದೀಪ ಮಹಿಳಾ ಮಂಡಲದ ಮುಖಂಡರಾದ ತೇಜಸ್ವಿನಿ ಬಿ. ಆಚಾರ್ಯ, ಅಂಗನವಾಡಿ ಮೇಲ್ವಿಚಾರಕಿ ಅನುಪಮ, ಮಾಜಿ ಮನಪಾ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಗ್ರಾಮ ಕರಣಿಕ ರಾಜ್ ಕುಮಾರ್, ರತ್ನಾಕರ್ ರಾವ್, ಕಿರಣ್ ರೈ ಎಕ್ಕೂರು, ಭರತ್ ರಾಜ್ ಶೆಟ್ಟಿ ಎಕ್ಕೂರು ಮತ್ತಿತರರು ಉಪಸ್ಥಿತರಿದ್ದರು.
ನಂದಾದೀಪ ಮಹಿಳಾ ಮಂಡಲದ ಕಾರ್ಯದರ್ಶಿ ರೇಖಾ ಶೆಟ್ಟಿ ನಿರೂಪಿಸಿ, ತನುಜಾ ವಂದಿಸಿದರು.