ಮಂಗಳೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ವತಿಯಿಂದ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ದುಶ್ವಟಮುಕ್ತರಾಗಿ ನವಜೀವನ ನಡೆಸುತ್ತಿರುವ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ, ಕೆಲವೊಮ್ಮೆ ತಮ್ಮ ಪರಿಸ್ಥಿತಿಯಿಂದಾಗಿ ಕೆಲವರು ವ್ಯಸನಕ್ಕೆ ಬಲಿಯಾಗಿರಬಹುದು. ಆದರೆ ನಂತರ ಅದರಿಂದ ಮುಕ್ತವಾಗುವುದು ತುಂಬಾ ಕಷ್ಟ, ಆದರೆ ಸರಿಯಾದ ಬದುಕಿಗೆ ಕೈ ಹಿಡಿದು ಕರೆದುಕೊಂಡು ಹೋಗುವವರು ಇದ್ದಾಗ ಆತ ಸರಿಯಾಗುತ್ತಿದ್ದಾನೆ. ಅಂತಹ ವ್ಯಸನಕ್ಕೆ ಬಲಿಯಾದವರನ್ನು ವ್ಯಸನ ಮುಕ್ತರಾಗಿಸುವ ಉತ್ತಮ ಕೆಲಸವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದರು.
ಕುಟುಂಬ ಎನ್ನುವುದು ಬಹಳ ಮಹತ್ವದ್ದು, ಆದರೆ ವ್ಯಸನಕ್ಕೆ ಒಳಗಾಗಿ ಕುಟುಂಬ ಒಡೆದು ಹೋಗುತ್ತಿದೆ ಹಾಗಾಗಿ ಯಾರು ವ್ಯಸನಕ್ಕೆ ಬಲಿ ಆಗದಿರಿ ಎಂದು ಹೇಳಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ದೇಹವನ್ನು ನಾನಾ ರೀತಿಯಲ್ಲಿ ಶುದ್ದಿ ಮಾಡಬಹುದು. ಅದಕ್ಕೆ ವ್ಯವಸ್ಥೆ ಕೂಡ ಇದೆ, ದೇಹ ಶುದ್ಧ ಆದರೆ ಸಾಕಾಗುವುದಿಲ್ಲ ಅಂತರಂಗ ಶುದ್ದಿಆಗಬೇಕು. ಕುಡುಕರಿಗೆ ಸ್ವಂತ ಪ್ರಜ್ಞೆ ಎಂಬುವುದು ಇರೋದಿಲ್ಲ. ಹೀಗಾಗಿ ಅಮಲಿನಿಂದ ಏನೇನೂ ಮಾತನಾಡುತ್ತಾನೆ. ಹಾಗಾಗಿ ಕುಡಿತ ಬಿಟ್ಟು ನವಜೀವನ ಆರಂಭಿಸಿದವರು ಜೀವನದಲ್ಲಿ ಒಳ್ಳೆಯದಾಗುತ್ತಾರೆ ಎಂದರು.
ವ್ಯಸನಮುಕ್ತ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೇಮಾವತಿ ಹೆಗ್ಗಡೆ, ಶಾಸಕ ಹರೀಶ್ ಪೂಂಜಾ, 4000 ಕ್ಕೂ ಅಧಿಕ ವ್ಯಸನಮುಕ್ತ ನವ ಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.












