ಮಂಡ್ಯ ಹನುಮ ಧ್ವಜ ತೆರವು ಪ್ರಕರಣ: ಜಿಲ್ಲಾಧಿಕಾರಿ ಸಂಧಾನ ಯಶಸ್ವಿ; ಬಂದ್ ಗೆ ತಾತ್ಕಾಲಿಕ ತಡೆ

ಮಂಡ್ಯ: ಮಂಡ್ಯ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿದ್ದು, ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ನಾಳೆ(ಫೆ.7) ನಡೆಯಬೇಕಿದ್ದ ಮಂಡ್ಯ ಬಂದ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು.

ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರು. ಆದರೆ, ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ.

ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್ ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಹೀಗಾಗಿ ಸಂಘಟನೆಗಳು ಬಂದ್ ಹಿಂಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲಾಡಳಿತದ ಮನವಿಗೆ ಸಮಾನ ಮನಸ್ಕರ ವೇದಿಕೆ ಸ್ಪಂದಿಸಿದ್ದು ಬಂದ್ ಹಿಂಪಡೆದಿದೆ. ಫೆ.7ರಂದು ಕರೆಕೊಟ್ಟಿದ್ದ ಬಂದ್ ತಾತ್ಕಾಲಿಕ ವಾಪಸ್ಸು ಪಡೆದಿದೆ. ಫೆ.9 ರಂದು ಮಂಡ್ಯ ನಗರ ಬಂದ್​ಗೂ ಅವಕಾಶ ಕೊಡಬೇಡಿ. ಫೆ.9 ರಂದು ಮಂಡ್ಯ ನಗರವನ್ನ ಭಜರಂಗದಳ ಬಂದ್ ಮಾಡಿದರೆ, ಅದನ್ನ ವಿರೋಧಿಸಿ ಮತ್ತೆ ಬಂದ್ ಗೆ ಕರೆಕೊಡುತ್ತೇವೆ ಎಂದು ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ ನೀಡಿದೆ. ಆದರೆ ಫೆ.9 ರಂದು ಮಂಡ್ಯನಗರ ಬಂದ್ ಮಾಡದ ಬಗ್ಗೆ ಇನ್ನೂ ಭಜರಂಗದಳ ನಿಲುವು ತಿಳಿಸಿಲ್ಲ.