ಮಂಚಿಕೋಡಿ: ಚಿನ್ನದ ಸರ ಸುಲಿಗೆ; ಆರೋಪಿಯ ಬಂಧನ

ಉಡುಪಿ: ಶಿವಳ್ಳಿ ಗ್ರಾಮದ ಮಂಚಿಕೋಡಿ ಎಂಬಲ್ಲಿ ಗುರುವಾರ ನಡೆದ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು‌ ಮಂಚಿಕೋಡಿಯ ನಿವಾಸಿ ಪ್ರವೀಣ್ ನಾಯ್ಕ್ (32) ಎಂದು ಗುರುತಿಸಲಾಗಿದೆ. ಈತ ಗುರುವಾರ ಬೆಳಿಗ್ಗೆ 8.30ಕ್ಕೆ ಬೈಕ್ ನಲ್ಲಿ ಬಂದು ಮಣಿಪಾಲ ಪ್ರೆಸ್ ಕೆಲಸಕ್ಕೆ ಹೋಗುತ್ತಿದ್ದ ಮಂಚಿಕೋಡಿಯ ಲಲಿತಾ ನಾಯ್ಕ್ ಎಂಬುವವರ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಲಲಿತಾ ಅವರು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತನಗೆ ಪರಿಚಯ ಇರುವ ಪ್ರವೀಣ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು‌ ಉಲ್ಲೇಖಿಸಿದ್ದರು. ಅದರಂತೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಅದೇ ದಿನ ಸಂಜೆಯ ವೇಳೆ ಆರೋಪಿ ಪ್ರವೀಣ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆತನಿಂದ 9 ಸಾವಿರ ಮೌಲ್ಯದ ಅರ್ಧ ತುಂಡು ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.