ಮಂಚಿಕೆರೆ: ಭೂಮಿ ಬಿರುಕುಬಿಟ್ಟ ಸ್ಥಳದಲ್ಲಿ ಅಧಿಕಾರಿಗಳಿಂದ ಪರಿಶೀಲನೆ

ಉಡುಪಿ:  ಐದು ವರ್ಷಗಳ ಹಿಂದೆ ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಮಣಿಪಾಲ–ಅಲೆವೂರು ರಸ್ತೆಯ ಮಂಚಿಕೆರೆ ಎಂಬಲ್ಲಿರುವ ನಾಗಬ್ರಹ್ಮಸ್ಥಾನದ ಎದುರಿನ ಎರಡನೇ ಅಡ್ಡರಸ್ತೆಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಇದೀಗ ಹಿಗ್ಗಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಬಿರುಕು ಬಿಟ್ಟಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಾನ್‌ಜಿ ನಾಯ್ಕ್‌
ನೇತೃತ್ವದಲ್ಲಿ ಭೂ ವಿಜ್ಞಾನಿಗಳಾದ ಮಹೇಶ್‌, ಡಾ. ಮಹದೇಶ್ವರ, ಗೌತಮ್‌ ಶಾಸ್ತ್ರಿ,
ಸಂಧ್ಯಾ, ಅಂತರ್ಜಲ ಪ್ರಾಧಿಕಾರದ ಪ್ರಭಾರ ಹಿರಿಯ ಭೂ ವಿಜ್ಞಾನಿ ಡಾ. ದಿನಕರ ಶೆಟ್ಟಿ,
ಕಂದಾಯ ನಿರೀಕ್ಷಕ ಉಪೇಂದ್ರ ಅವರನ್ನು ಒಳಗೊಂಡ ತಂಡ ಮಂಚಿಕೆರೆಯ ಭೌಗೋಳಿಕ ಶಿಲಾ ರಚನೆಯ ಬಗ್ಗೆ ಅಧ್ಯಯನ ನಡೆಸಿತು.

ಅಧ್ಯಯನ, ಪರಿಶೀಲನೆ:
ಮಂಚಿಕೆರೆಯ ಎರಡನೇ ಅಡ್ಡರಸ್ತೆ ಭಾಗದ ಪ್ರದೇಶ, ಬಿರುಕು ಬಿಟ್ಟಿರುವ ರಸ್ತೆ, ಮನೆಯ ಗೋಡೆ, ಕಾಂಪೌಂಡ್‌, ಬಾವಿಗಳನ್ನು ಪರೀಕ್ಷಿಸಿದರು. ಮಳೆ ನೀರು ಬಿರುಕು ಬಿಟ್ಟಿರುವ  ಸ್ಥಳಗಳನ್ನು ಗಮನಿಸಲಾಯಿತು.  ಬಿರುಕಿನಿಂದ ಹಾನಿಗೊಳಗಾಗಿರುವ ಮಂಚಿಕೆರೆಯ ರಮೇಶ್‌ ನಾಯಕ್‌ ಅವರ ಮನೆಯ ಗೋಡೆ, ಕೊಠಡಿ, ಬಾವಿ, ಕಾಂಪೌಂಡ್‌ ಪರಿಶೀಲಿಸಿದರು.

300 ಮೀ. ವ್ಯಾಪ್ತಿಯಲ್ಲಿ ಬಿರುಕು:
ಮಂಚಿಕೆರೆಯಲ್ಲಿ 300 ಮೀಟರ್‌ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು,  ಮಳೆ
ನೀರು ಹರಿದುಕೊಂಡು ಬಂದು ಈ ಬಿರುಕಿನೊಳಗೆ ಸೇರಿಕೊಳ್ಳುತ್ತಿವೆ. ಭೂಮಿಯಲ್ಲಿ ಬಿರುಕು ಬಿಟ್ಟ ಪ್ರದೇಶದ ಒಂದು ಭಾಗ ಮೇಲಿದ್ದು, ಒನ್ನೊಂದು ಭಾಗ ಕೆಳಗೆ ಕುಸಿದಿರುವಂತೆ ಗೋಚರಿಸುತ್ತಿದೆ. ಎಲ್ಲ ಕಡೆಗಳಲ್ಲಿ ಬಾವಿ, ಕಾಂಪೌಂಡ್‌, ಗೋಡೆ, ಡಾಂಬಾರು ರಸ್ತೆ, ಮುರಕಲ್ಲಿನಲ್ಲಿ ಬಿರುಕು ಬಿದ್ದಿದೆ.


ಭೂ ವಿಜ್ಞಾನಿಗಳ ಅಧಿಕಾರಿಗಳ ತಂಡ ತೆರಳಿದ ಬಳಿಕ ಉಡುಪಿ ತಾಲ್ಲೂಕು ಪಂಚಾಯಿತಿ
ಕಾರ್ಯನಿರ್ವಹಣಾಧಿಕಾರಿ ರಾಜು, 80 ಬಡಗಬೆಟ್ಟು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾಂತರಾಮ್‌ ಶೆಟ್ಟಿ, ಪಿಡಿಒ ಸುಮನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.