ಶಕಲಕ ಬೂಮ್ ಬೂಮ್ ರಸಪ್ರಶ್ನೆ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಮಾನಸಿ ಸುಧೀರ್

ಉಡುಪಿ: ತುಳುನಾಡಿನ ಮೊಟ್ಟಮೊದಲ ತುಳು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶಕಲಕ ಬೂಮ್ ಬೂಮ್ ಪೋಸ್ಟರಿನಲ್ಲಿರುವ ವ್ಯಕ್ತಿಯನ್ನು ಗುರುತಿಸಿ ಬಹುಮಾನ ಗೆಲ್ಲಿ ಎನ್ನುವ ರಸಪ್ರಶ್ನೆಯನ್ನು ಆಯೋಜಿಸಲಾಗಿದ್ದು, ಇದಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿತ್ತು. ಭಾನುವಾರದಂದು ನರಸಿಂಗೆಯಲ್ಲಿ ಕಾಂತಾರಾ ಖ್ಯಾತಿಯ ಮಾನಸಿ ಸುಧೀರ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಸರಿ ಉತ್ತರ ನೀಡಿದ ವಿಜೇತರ ಹೆಸರನ್ನು ಬಹಿರಂಗಪಡಿಸಿದರು.

ಚಿತ್ರದ ಪೋಸ್ಟರಿನಲ್ಲಿ ನಟ ಅರವಿಂದ ಬೋಳಾರ್ ಅವರು ಜೀನೀ ಪಾತ್ರದಲ್ಲಿದ್ದು, ಎರಡೂ ಸರಿ ಉತ್ತರ ನೀಡಿದವರಲ್ಲಿ ಪವನ್ ಮಡಿವಾಳ ಮತ್ತು ಒಂದು ಸರಿ ಉತ್ತರ ನೀಡಿದವರಲ್ಲಿ ಹರ್ಷಿ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಟಿ ಮಾನಸಿ, ಒಂದು ಸಿನಿಮಾದ ಹಿಂದೆ ಅಸಂಖ್ಯಾತ ಜನರ ಪರಿಶ್ರಮವಿರುತ್ತದೆ. ಚಿತ್ರವು ಗೆದ್ದರೆ ಅದು ಒಬ್ಬನ ಗೆಲುವಲ್ಲ, ಅದು ಇಡೀ ಚಿತ್ರ ತಂಡದ ಗೆಲುವಾಗಿರುತ್ತದೆ. ಶಕಲಕ ಬೂಮ್ ಬೂಮ್ ಎನ್ನುವುದು ಉತ್ಸಾಹ ಮತ್ತು ಚೈತನ್ಯವನ್ನು ನೀಡುವ ಶೀರ್ಷಿಕೆಯಾಗಿದ್ದು, ಚಿತ್ರವು ಯಶಸ್ವಿಯಾಗಲಿ. ಹೊಸಬರೇ ಹೆಚ್ಚಿರುವ ಇಂತಹ ಚಿತ್ರಗಳು ಗೆದ್ದಲ್ಲಿ ಮುಂದೆ ಹಲವಾರು ಜನರಿಗೆ ಸ್ಪೂರ್ತಿ ಸಿಗುವುದು. ಕೇವಲ ತುಳುನಾಡು ಮಾತ್ರವಲ್ಲ, ಸಮಸ್ತ ಕರ್ನಾಟಕವೇ ಈ ಚಿತ್ರವನ್ನು ಒಪ್ಪಿಕೊಂಡು ಅಪ್ಪಿಕೊಳ್ಳಲಿ, ಚಿತ್ರವು ಶತದಿನೋತ್ಸವವನ್ನು ಆಚರಿಸಲಿ ಎಂದು ಶುಭಹಾರೈಸಿದರು.

ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ಮಾತನಾಡಿ, 2019 ರಲ್ಲಿ ತೆರೆಕಾಣಬೇಕಿದ್ದ ಚಿತ್ರವು ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದು ಇದೀಗ ಡಿ.16 ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುವ ಕಥಾ ಹಂದರವಿದೆ. ಸಮಾಜವನ್ನು ಒಡೆಯುವ ಸಮಾಜ ಘಾತಕ ಶಕ್ತಿಗಳು ಒಳ್ಳೆಯ ಶಕ್ತಿಗಳಿಂದಾಗಿ ಶಿಕ್ಷೆ ಅನುಭವಿಸುವ ನೀತಿ ಕಥೆ ಇದೆ. ಚಿತ್ರದ ಸೆನ್ಸರ್ ಸಂಪೂರ್ಣವಾಗಿದ್ದು, ಮೊದಲನೆ ಬಾರಿಗೆ ಚಿತ್ರವೊಂದರ ಸೆನ್ಸರ್ ಸಂಪೂರ್ಣವಾದ ಬಳಿಕ ಪೋಸ್ಟರ್ ಬಿಡುಗಡೆಗೊಳಿಸಿ ಇತಿಹಾಸ ರಚಿಸಲಾಗಿದೆ. ಚಿತ್ರದಲ್ಲಿ 65% ದಷ್ಟು ಹೊಸಬರಿಗೆ ಅವಕಾಶ ನೀಡಲಾಗಿದ್ದು, ಕಲಾಭಿಮಾನಿಗಳು ಈ ಚಿತ್ರವನ್ನು ಹರಸಿ ಹೊಸ ಪ್ರತಿಭೆಗಳಿಗೆ ಬೆಳೆಯಲು ಅವಕಾಶ ನೀಡಬೇಕು ಎಂದರು.

ಚಿತ್ರದ ನಿರ್ದೇಶಕ ಶ್ರೀಶ ಎಳ್ಳಾರೆ ಮಾತನಾಡಿ ಚಿತ್ರವು 60 ಲಕ್ಷದ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ಇದಕ್ಕೆ ನಿರ್ಮಾಪಕರಾದ ನಿತ್ಯಾನಂದ ನಾಯಕ್ ಮತ್ತು ಉಮೇಶ್ ಪ್ರಭು ಅವರ ಸಂಪೂರ್ಣ ಸಹಕಾರವಿದ್ದು ಚಿತ್ರತಂಡವು ಅವರಿಗೆ ಋಣಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮೇಶ್ ಪ್ರಭು, ನರಸಿಂಗೆ ದೇವಸ್ಥಾನದ ಆಡಳಿತ ನಿರ್ದೇಶಕ ರಮೇಶ್ ಸಾಲ್ವಂಕರ್, ಮಾಜಿ ಅಧ್ಯಕ್ಷ ಆನಂದ್ ನಾಯಕ್, ರೋಟರಿ ಕ್ಲಬ್ ಮಣಿಪಾಲ್ ಟೌನ್ ನ ಸದಸ್ಯರು, ಚಿತ್ರಕಥೆಗಾರ ಸುನಿಲ್, ನಾಯಕ ನಟ ಗಾಡ್ವಿನ್, ಸಂಗೀತ ನಿರ್ದೇಶಕ ಡಾಲ್ವಿನ್ ಹಾಗೂ ಚಿತ್ರ ತಂಡದ ಇನ್ನಿತರ ಕಲಾವಿದರು ಮತ್ತು ತಂತ್ರಜ್ಞರು ಉಪಸ್ಥಿತರಿದ್ದರು.