ಪಡುಬಿದ್ರೆ: ಇಲ್ಲಿನ ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ಜಾರಂದಾಯ ಬಂಟ ಸೇವಾ ಸಮಿತಿಯ ನೇತೃತ್ವದಲ್ಲಿ ನೇಮೋತ್ಸವವು ವರ್ಷಂಪ್ರತಿ ನಡೆಯುತ್ತಿದ್ದು, ಇದೀಗ ಇಲ್ಲಿ ವಿಚಿತ್ರವೆನಿಸುವಂತಹ ಘಟನೆ ನಡೆದಿದೆ. ದೈವಸ್ಥಾನದ ಉಸ್ತುವಾರಿಯು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿಯದ್ದಾಗಿದ್ದು, ಈ ಹಿಂದೆ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಆದರೆ ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಅಧಿಕಾರ ಕಳೆದುಕೊಂಡರು. ಹಾಗಂತ ಸುಮ್ಮನಿರದ ಪ್ರಕಾಶ್ ಶೆಟ್ಟಿ 9 ಜನರ ಪ್ರತ್ಯೇಕ ಟ್ರಸ್ಟ್ ರಚಿಸಿ ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ ಮತ್ತು ದೈವಸ್ಥಾನದ ಹಕ್ಕು ತಮಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಾರೆ.
ವರ್ಷಂಪ್ರತಿಯಂತೆ ಈ ವರ್ಷವೂ ಜ. 7 ರಂದು ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿದಾಗ, ಇದಕ್ಕೆ ಅಡ್ಡಗಾಲಿಟ್ಟ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆಯುತ್ತದೆ. ಡಿಸೆಂಬರ್ 23ರಂದು ಜಯಪೂಜಾರಿ ಹಾಗೂ ಪ್ರಕಾಶ್ ಶೆಟ್ಟಿ ಜೊತೆಯಾಗಿ ಕೋಲಕ್ಕೆ ತಡೆಯಾಜ್ಞೆ ತಂದರೆ, ಡಿಸೆಂಬರ್ 24 ರಂದು ಜಯ ಪೂಜಾರಿ ಪಕ್ಕದಲ್ಲಿ ಕೊಡಮಣಿತ್ತಾಯ ದೈವದ ತಂಬಿಲ ಸೇವೆ ನಡೆಯುತ್ತಿದ್ದ ಸಂದರ್ಭ ಎಲ್ಲರೆದುರೇ ಕುಸಿದು ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಈ ಪ್ರಕರಣವನ್ನು ಕೈಗೆತ್ತಿಕೊಂಡ ವಕೀಲ ಬಿ.ನಾಗರಾಜ್, ಕೋರ್ಟ್ನಲ್ಲಿ ವಾದ ಮಂಡಿಸಿ ತಡೆಯಾಜ್ಞೆಯನ್ನು ತೆರವು ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಪ್ರಕಾಶ್ ಶೆಟ್ಟಿಯವರು ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದಿರುವ ಆರೋಪ ಕೂಡಾ ಇದೆ. ಪ್ರಕಾಶ್ ಶೆಟ್ಟಿ, ಕೇಶವ ಪೂಜಾರಿ ಮತ್ತು ಮೋಹನ್ ಅಮಿನ್ ತನಗೆ ಹಣದ ಆಮಿಷ ಮತ್ತು ಬೆದರಿಕೆ ಒಡ್ಡಿದ್ದರು ಎಂದು ಭಾಸ್ಕರ ಬಂಗೇರ ಆರೋಪಿಸಿದ್ದಾರೆ.
ಜನವರಿ 7 ರಂದು ನಡೆಯಬೇಕಿದ್ದ ನೇಮೋತ್ಸವವನ್ನು ಜಯ ಪೂಜಾರಿ ದೈವಾಧೀನರಾದ ಕಾರಣಕ್ಕೆ ಸಮಿತಿಯು ಮುಂದೂಡಲು ತೀರ್ಮಾನಿಸಿದೆ. ಆದರೆ ಜಿದ್ದು ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ, ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ.7 ರಂದೇ ನೇಮೋತ್ಸವ ಮಾಡಲು ಹೊರಟಿದೆ. ಕೋರ್ಟ್ನಲ್ಲಿ ತಡೆಯಾಜ್ಞೆ ತೆರವಾಗಿದ್ದರೂ ಊರವರ ವಿರುದ್ಧ ಹೊರಟಿರುವ ಪ್ರಕಾಶ್ ಶೆಟ್ಟಿ ಮತ್ತು ತಂಡದ ವಿರುದ್ಧಆಕ್ರೋಶ ವ್ಯಕ್ತವಾಗಿದ್ದು ಊರ ಸಮಸ್ತರು 500 ವರ್ಷಗಳ ಇತಿಹಾಸವಿರುವ ಜಾರಂದಾಯ ಬಂಟ ಸೇವಾ ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.
ಸೂತಕದ ನಡುವೆಯೂ ಕೋಲ ನಡೆಸಲು ಪಟ್ಟು ಹಿಡಿದಿದ್ದ ಟ್ರಸ್ಟ್, ಆ ಪ್ರಯತ್ನವನ್ನು ಕೈಬಿಟ್ಟು ಪ್ರಾರ್ಥನೆ ಮಾಡಿ ತೆರಳಿದೆ ಎನ್ನಲಾಗಿದೆ. ದೈವಸ್ಥಾನದ ಎದುರು ನಿಂತು ಸಮೂಹಿಕ ಪ್ರಾರ್ಥನೆ ಮಾಡಿದ ಟ್ರಸ್ಟ್ ಸದಸ್ಯರು, ನಿಮ್ಮ ಸ್ಥಾನಕ್ಕೆ ಬೀಗ ಹಾಕಿದ್ದಾರೆ. ಇಲ್ಲಿ ನಡೆಯುತ್ತಿರುವುದು ನಿಮ್ಮಇಚ್ಚೆ. ನಮಗೆ ಯಾವ ದೋಷ ಬರದಂತೆ ನೋಡಿಕೋ. ಮುಂದಿನ ದಿಗಗಳಲ್ಲಿ ಸಮಿತಿಯವರಿಗೆ ಒಳ್ಳೆ ಬುದ್ದಿ ಕೊಡು ಎಂದು ಪ್ರಾರ್ಥನೆ ಮಾಡಿ ದೈವಕ್ಕೆ ಅಡ್ಡ ಬಿದ್ದು ತೆರಳಿದ್ದಾರೆ ಎಂದು ವರದಿಯಾಗಿದೆ.












