ನವದೆಹಲಿ: ದೇಶದಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಅನಿವಾರ್ಯ. ಲಾಕ್ಡೌನ್ ನಿರ್ಧಾರ ಬಿಟ್ಟು ಬೇರೆ ದಾರಿ ಇರಲಿಲ್ಲ, ಇದರಿಂದ ತುಂಬಾ ಜನರಿಗೆ ತೊಂಧರೆಯಾಗಿದೆ. ಅದಕ್ಕೆ ಕ್ಷಮೆ ಇರಲಿ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿಕೊಂಡರು.
ಭಾನುವಾರ ಬೆಳಗ್ಗೆ ತಮ್ಮ ಜನಪ್ರಿಯ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದರು.
ಇದೇ ಕೋವಿಡ್-19 ಪ್ರಕರಣಗಳ ಪರೀಕ್ಷೆ ನಡೆಸುತ್ತಿರುವ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರು ಸದಾ ಎಚ್ಚರಿಕೆಯಿಂದ ಇರಬೇಕು ಎಂದರು.
ಆಶಾ ಕಾರ್ಯಕರ್ತೆಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ಗಳ ಬಗ್ಗೆ ದೇಶ ಕಾಳಜಿ ಮಾಡುತ್ತಿದೆ. ನಮ್ಮ ನರ್ಸ್ ಸೋದರಿಯರು ಫ್ಲಾರೆನ್ಸ್ ನೈಂಟಿಗೇಲ್ ಪ್ರತಿಪಾದಿಸಿದ ಆಶಯಗಳನ್ನು ಎತ್ತಿಹಿಡಿಯುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದೇ ವೇಳೆ ಲಾಕ್ಡೌನ್ ಸಮಯದಲ್ಲಿ ಸಂಕಷ್ಟ ಎದುರಿಸುತ್ತಿರುವ ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಮೋದಿ, ‘ನಮ್ಮ ದೇಶದಲ್ಲಿ ಸಾಕಷ್ಟು ಜನರು ನಿಜ ಜೀವನದ ಹೀರೊಗಳಾಗಿ ಹೊರಹೊಮ್ಮುತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿಯೂ ದಿನಸಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಚಾಲಕರು ಅವಶ್ಯಕ ವಸ್ತುಗಳ ಸಾಗಣೆಗೆ ಶ್ರಮಿಸುತ್ತಿದ್ದಾರೆ. ಬ್ಯಾಂಕ್ಗಳನ್ನು ತೆರೆಯಲು ಸಿಬ್ಬಂದಿ ಹಿಂಜರಿಯುತ್ತಿಲ್ಲ. ಅವರೆಲ್ಲರಿಗೂ ನಮ್ಮ ಧನ್ಯವಾದಗಳು’ ಎಂದು ಹೇಳಿದರು.
ಸೋಂಕಿತರ ಅವಹೇಳನ ಬೇಡ:
ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಕಾರಣಕ್ಕೆ ಅವರನ್ನು ದೈಹಿಕವಾಗಿ ಪ್ರತ್ಯೇಕವಾಗಿ ಇಡಬೇಕಾಗಿದೆ. ಭಾವನಾತ್ಮಕವಾಗಿ ಅವರನ್ನು ದೂರ ಮಾಡಬೇಡಿ. ಅವರನ್ನು ಪ್ರೀತಿಯಿಂದ ಕಾಣಿ ಎಂದರು. ಜನರು ಲಾಕ್ಡೌನ್ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದಿರುವ ಮೋದಿ, ‘ಲಾಕ್ಡೌನ್ ಅವಧಿಯಲ್ಲಿ ಹಲವರು ಪುಸ್ತಕಗಳನ್ನು ಓದುತ್ತಿದ್ದಾರೆ. ಸಂಗೀತ ಅಭ್ಯಾಸ ಆರಂಭಿಸಿದ್ದಾರೆ. ಹಳೆಯ ಸ್ನೇಹಿತರೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ನೀವು ಇಂಥದ್ದೇನಾದರೂ ಮಾಡಬಹುದು’ ಎಂದು ಹೇಳಿದರು.