ಉಡುಪಿ: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಪಕ್ಷವು ಗ್ಯಾರಂಟಿ ಕೊಟ್ಟಿತ್ತು. ಇದನ್ನೇ ನೆಪವಾಗಿಸಿಕೊಂಡು ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದ ನಿವಾಸಿಗಳು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಕರೆಂಟ್ ಬಿಲ್ ಕಟ್ಟಲ್ಲ. ನೀವು ಕಾಂಗ್ರೆಸ್ ನಾಯಕರನ್ನೇ ಕೇಳಿ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದು ಬೆಸ್ಕಾಂ ಸಿಬ್ಬಂದಿಗೆ ಆವಾಜ್ ಹಾಕಿದ್ದ ಬಗ್ಗೆ ವರದಿಗಳಾಗಿದ್ದವು. ಇದೀಗ ಉಡುಪಿಯಲ್ಲಿಯೂ ಇಂತಹ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಉಡುಪಿಯ ಪೆರಂಪಳ್ಳಿ ನಿವಾಸಿ ವಾಸುದೇವ ಭಟ್ ಎಂಬವರು ಮೀಟರ್ ಬೋರ್ಡಿಗೆ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಚೀಟಿ ಬರೆದು ಅಂಟಿಸಿದ್ದಾರೆ. “ಮೆಸ್ಕಾಂನವರೇ ಕ್ಷಮಿಸಿ ಜೂನ್ ತಿಂಗಳಿಂದ ನಮಗೆ ಕರೆಂಟ್ ಬಿಲ್ ಕೊಡಬೇಡಿ. ನಾವು ಬಿಲ್ ಕಟ್ಟಲ್ಲ” ಎಂದು ಚೀಟಿಯಲ್ಲಿ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಸುದೇವ ಭಟ್ ಪೆರಂಪಳ್ಳಿ, ಕಾಂಗ್ರೆಸ್ ಸರ್ಕಾರ ಬಂದರೆ ಜೂನ್ ತಿಂಗಳಿಂದ ಉಚಿತ ವಿದ್ಯುತ್ ಕೊಡುವ ಯೋಜನೆ ಘೋಷಣೆಯಾಗಿದೆ. ನಾನು ಸೇರಿದಂತೆ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇಕಡಾ 95 ಜನತೆ ಇದರ ಲಾಭ ಪಡೆಯಬಹುದು ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಹೇಳಿರುವ ಶೇಕಡಾ 95ರ ಒಳಗೆ ನಾನು ಕೂಡ ಬರುತ್ತೇನೆ ಎಂದಿದ್ದಾರೆ.
ನಾನು ಕೂಡ ಒಬ್ಬ ಫಲಾನುಭವಿ ಎಂಬುದು ದೃಢ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ನಾನು ವಿದ್ಯುತ್ ಬಿಲ್ ಕಟ್ಟಲ್ಲ. ನಾನು ತಿಂಗಳಿಗೆ 200 ಯೂನಿಟ್ ಖರ್ಚು ಮಾಡುತ್ತಿಲ್ಲ. ನಾನು ಫಲಾನುಭವಿ ಆಗಿರುವುದರಿಂದ ಮೀಟರ್ ಬೋರ್ಡಿನಲ್ಲಿ ಫಲಕ ಹಾಕಿದ್ದೇನೆ. ನಾನು ಇಲ್ಲದಿರುವಾಗ ಮೆಸ್ಕಾಂನವರು ಬಂದರೆ ಅವರಿಗೆ ಗೊತ್ತಾಗಲಿ ಎಂದು ಬೋರ್ಡ್ ಅಳವಡಿಸಿದ್ದೇನೆ. ನನಗೆ ಮೆಸ್ಕಾಂನವರು ಕರೆಂಟ್ ಬಿಲ್ ಕೊಡಬೇಕಾಗಿಲ್ಲ. ನಾನು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ಈ ಯೋಜನೆಗೆ ಅರ್ಹ ಫಲಾನುಭವಿ ಆಗಿದ್ದೇನೆ ಎಂದು ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.