ನಾಯಿಯಂತೆ ಕಾಣಲು ₹ 12 ಲಕ್ಷ ಖರ್ಚು? ಮಾನವನಿಂದ ನಾಯಿಯಾಗಿ ಬದಲಾದ ಜಪಾನ್ ವ್ಯಕ್ತಿ!!

ಟೋಕಿಯೋ: ಇದು ನಾಯಿಯಲ್ಲ, ಮಾನವ! ಅಥವಾ ಇದು ನಾಯಿಯೋ, ಮಾನವನೋ? ಗೊತ್ತೆ ಆಗುವುದಿಲ್ಲ!! ಇಂತಹ ವಿಲಕ್ಷಣ ಘಟನೆಯೊಂದರಲ್ಲಿ, ಜಪಾನ್‌ನ ವ್ಯಕ್ತಿಯೊಬ್ಬರು ₹ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ನಾಯಿಯಂತೆ ಕಾಣುವ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಟೋಕೋ ಹೆಸರಿನ ಈ ವ್ಯಕ್ತಿ ನಾಯಿಯಂತೆ ಕಾಣಲು ಯಾವುದೇ ರೀತಿಯ ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ವಿಧಾನದ ಮೊರೆ ಹೋಗಲಿಲ್ಲ. ಕೋಲಿ- ಎನ್ನುವ ಶ್ವಾನ ತಳಿಯಂತೆ ಕಾಣಲು ಆತ Zeppet ಎಂಬ ವೃತ್ತಿಪರ ಏಜೆನ್ಸಿಯಿಂದ ಮಾನವ ಗಾತ್ರದ ನಾಯಿಯ ವೇಷಭೂಷಣವನ್ನು ಖರೀದಿಸಿದ್ದಾನೆ.

ಝೆಪ್ಪೆಟ್ ಜಾಹೀರಾತುಗಳು, ಚಲನಚಿತ್ರಗಳು ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗಾಗಿ ಶಿಲ್ಪಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ಏಜೆನ್ಸಿಯು ಜಪಾನ್‌ನ ಪ್ರಸಿದ್ಧ ಮ್ಯಾಸ್ಕಾಟ್‌ಗಳಿಗೆ ವೇಷಭೂಷಣಗಳನ್ನು ಒದಗಿಸುತ್ತದೆ ಮತ್ತು ಟಿವಿಗಾಗಿ ಬಟ್ಟೆಗಳನ್ನು ಸಹ ಮಾಡುತ್ತದೆ ಎಂದು ಜಪಾನೀಸ್ ನ್ಯೂಸ್ ಪೋರ್ಟಲ್ news.mynavi ವರದಿ ಮಾಡಿದೆ.

ವರದಿಯ ಪ್ರಕಾರ, ಟೋಕೊ 2 ಮಿಲಿಯನ್ ಯೆನ್ ಅಥವಾ ಸರಿಸುಮಾರು ₹12 ಲಕ್ಷ ರೂಪಾಯಿಗಳನ್ನು ವೇಷಭೂಷಣಕ್ಕಾಗಿ ವ್ಯಯಿಸಿದ್ದಾನೆ, ಇದನ್ನು ತಯಾರಿಸಲು 40 ದಿನಗಳು ತಗಲಿವೆ. ತನಗೆ ನಾಲ್ಕು ಕಾಲಿನ ಪ್ರಾಣಿಗಳು ‘ವಿಶೇಷವಾಗಿ ಮುದ್ದಾಗಿ ಕಾಣುವ’ ಪ್ರಾಣಿಗಳು ಇಷ್ಟ ಎಂದಿರುವ ಟೋಕೋ ತನ್ನ ರುಚಿ ಮತ್ತು ವೇಷಭೂಷಣವನ್ನು ಹಾಕಿದಾಗ ಅದು ನೈಜವಾಗಿ ಕಾಣುವುದರಿಂದ ತಾನು ಕೂಲಿ ಎಂಬ ಶ್ವಾನ ತಳಿಯನ್ನು ಆಯ್ಕೆ ಮಾಡಿಕೊಂಡೆ ಎಂದು ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.