ಉಡುಪಿ: ಬಾವಿಗೆ ಹಾರಿ ಮೇಸ್ತ್ರಿ ಆತ್ಮಹತ್ಯೆ

ಉಡುಪಿ: ಗಾರೆ ಮೇಸ್ತ್ರಿಯೊಬ್ಬರು ನೆರೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ 76 ಬಡಗುಬೆಟ್ಟು ಗ್ರಾಮದ ಚಂದು ಮೈದಾನದ ಬಳಿ ಶನಿವಾರ ನಡೆದಿದೆ.

ಬಡಗುಬೆಟ್ಟು ಗ್ರಾಮದ ನಿವಾಸಿ 47 ವರ್ಷದ ಸದಾನಂದ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಮೇಸ್ತ್ರಿ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಶನಿವಾರ ಬೆಳಿಗ್ಗೆ 11.15 ಸುಮಾರಿಗೆ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಗ್ನಿಶಾಮಕ ದಳದವರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕಾರ ನೀಡಿದರು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.