ಕುಂದಾಪುರ: ಹೊರರಾಜ್ಯದಿಂದ ಬಂದಿದ್ದು, ಪತಿಯನ್ನು ತ್ಯಜಿಸಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನು ಪ್ರೀತಿಸಿ ಮದುವೆಯಾದ ವ್ಯಕ್ತಿಯೊಬ್ಬ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಆತನ ವಿರುದ್ದ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಬೈಂದೂರಿನ ಸೊಹೇಲ್ ಎಂದು ಗುರುತಿಸಲಾಗಿದೆ. ಈತ 11 ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದು ಆಕೆಯ ಇಬ್ಬರು ಮಕ್ಕಳೊಂದಿಗೆ ಕುಂದಾಪುರದಲ್ಲಿ ವಾಸವಾಗಿದ್ದ. ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಇದನ್ನು ಅರಿತ ಮಹಿಳೆಯು ತನ್ನ ಮಕ್ಕಳೊಂದಿಗೆ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆದರೆ ಅಲ್ಲಿಯೂ ಅವರನ್ನು ಹಿಂಬಾಲಿಸಿದ ಸೊಹೇಲ್, ಮಹಿಳೆ ಹಾಗೂ ಆಕೆಯ ಮಗಳನ್ನು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಿಡಿಸಲು ಬಂದ ಬಾಲಕಿಯ ತಾಯಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆತನ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯು ತನ್ನ ಮಗಳನ್ನು ಆತನಿಂದ ಪಾರುಮಾಡಿ ತಪ್ಪಿಸಿಕೊಂಡು ಬಂದಿದ್ದು ಪೊಲೀಶ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ವರದಿಯಾಗಿದೆ.