INDIA ಬಣ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ; ಗೆಲ್ಲುವ ಬಗ್ಗೆ ಗಮನಹರಿಸಿ ಎಂದ ಖರ್ಗೆ

ನವದೆಹಲಿ: ಮಂಗಳವಾರ ಇಲ್ಲಿ ನಡೆದ Indian National Developmental, Inclusive Alliance (INDIA) ಸಭೆಯಲ್ಲಿ ಡಿಸೆಂಬರ್ 31 ರೊಳಗೆ ಬಣವು ತನ್ನ ಸೀಟು ಹಂಚಿಕೆಯನ್ನು ಅಂತಿಮಗೊಳಿಸುತ್ತದೆ ಎಂಬ ಸಲಹೆಗಳ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೈತ್ರಿ ಪಕ್ಷದ ಪ್ರಧಾನ ಮಂತ್ರಿಯಾಗಿ ಪ್ರಸ್ತಾಪಿಸಿದ್ದಾರೆ.

ಅವರು ಭಾರತದ ಮೊದಲ ದಲಿತ ಪ್ರಧಾನಿಯಾಗಬಹುದು ಎಂದು ಬ್ಯಾನರ್ಜಿ ಹೇಳಿರುವುದನ್ನು ಹಿರಿಯ ವಿರೋಧ ಪಕ್ಷದ ನಾಯಕರೊಬ್ಬರು ಉಲ್ಲೇಖಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಮುಖ್ಯಸ್ಥರ ಹೆಸರನ್ನು ಮೊದಲ ದಲಿತ ಪ್ರಧಾನಿ ಆಯ್ಕೆ ಎಂದು ಅನುಮೋದಿಸಿದಾಗ, ಖರ್ಗೆ ಅವರು ತಮ್ಮ ದಲಿತ ಗುರುತನ್ನು ಎಂದಿಗೂ ಬಳಸಿಲ್ಲ ಎಂದು ಪ್ರತಿಪಾದಿಸಿದರು.

INDIA ಬಣದ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಖರ್ಗೆ, ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚುನಾವಣೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಮೊದ್ಲೌ ಚುನಾವಣೆ ಗೆಲ್ಲುವ ಬಗ್ಗೆ ಗಮನವಿಡಬೇಕು ನಂತರ ಸಂಸದರ ನಿರ್ಣಯದಂತೆ ಪ್ರಧಾನಿ ಅಭ್ಯರ್ಥಿ ಪ್ರಕ್ರಿಯೆ ನಡೆಯುವುದು ಎಂದು ಅವರು ಹೇಳಿದರು.

ದೆಹಲಿಯಲ್ಲಿ ನಡೆದ INDIA ಬಣದ ನಾಲ್ಕನೇ ಸಭೆಯಲ್ಲಿ 28 ಪಕ್ಷಗಳು ಭಾಗವಹಿಸಿದ್ದವು. ಎರಡು ಗಂಟೆಗಳ ಕಾಲ ಸಭೆ ನಡೆಯಿತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ ಸಂಸದರನ್ನು ಸಾಮೂಹಿಕ ಅಮಾನತುಗೊಳಿಸಿದ ವಿರುದ್ಧ ಡಿಸೆಂಬರ್ 22 ರಂದು ಜಂಟಿ ಪ್ರತಿಭಟನೆಗಳನ್ನು ನಡೆಸಲು ಬಣವು ಒಪ್ಪಿಕೊಂಡಿತು.