ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ, ರಕ್ತನಿಧಿ ವಿಭಾಗ ಕೆ.ಎಮ್.ಸಿ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಮಲ್ಪೆ ಘಟಕ ಹಾಗೂ ಮಹಿಳಾ ಸಂಘಟನೆ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಇವರ ನೇತೃತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಆಗಸ್ಟ್ 16 ರಂದು ಸರಕಾರಿ ಪದವಿ ಪೂರ್ವ ಕಾಲೇಜು, ಸಭಾಭವನ ಮಲ್ಪೆಯಲ್ಲಿ ಜರಗಿತು.
ಶಿಬಿರದಲ್ಲಿ ಸುಮಾರು 30 ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ರಕ್ತದಾನವು ಅಗತ್ಯವಿರುವ ರೋಗಿಗಳ ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ.
ಒಬ್ಬ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಬಹುದು. ಯುವಜನತೆ ರಕ್ತದಾನ ಮಾಡಿದರೆ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಆಸ್ಪತ್ರೆಯವರು ಒದಗಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ನಿರಂತರವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಯೋಧರಾದ ಸಂತೋಷ್ ಶ್ರೀಯಾನ್ ಇವರನ್ನು ಸನ್ಮಾನಿಸಲಾಯಿತು.
ಮಲ್ಪೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಸಂಪ್ರೀತಾ ರೋಹಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ರವೀಶ್ ಕೊರವಡಿ, ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ಅಮೀನ್, ಕಾರ್ಯದರ್ಶಿ ಶೇಖರ್ ತೋಳಾರ್, ರೋಟರಿ ಮಲ್ಪೆ ಕರಾವಳಿಯ ಅಧ್ಯಕ್ಷರಾದ ಸುರೇಶ್ ಕರ್ಕೇರ, ರೋಟರಿ ಕಲ್ಯಾಣಪುರದ ಮಾಜಿ ಅಧ್ಯಕ್ಷರಾದ ರಾಮ ಪೂಜಾರಿ, ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ರವಿ ಕಾಂಚನ್,ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಶೇರಿಗಾರ್, ಕೆ. ಎಮ್. ಸಿ. ಮಣಿಪಾಲದ ಡಾ. ಓಜಸ್ವಿ ಉಪಸ್ಥಿತರಿದ್ದರು. ಬಡಗಬೆಟ್ಟು ಸೊಸೈಟಿ ಮಲ್ಪೆ ಶಾಖಾ ಮುಖ್ಯಸ್ಥರಾದ ನವೀನ್ ಕೆ. ಸ್ವಾಗತಿಸಿ,ಮಹೇಶ್ ಕುಮಾರ್ ವಂದಿಸಿದರು. ಯಶೋದ ಕೇಶವ್ ಕಾರ್ಯಕ್ರಮ ನಿರೂಪಿಸಿದರು.















