ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾದ ರಮೇಶ್ ಸಹೋದರ ಆತ್ಮಹತ್ಯೆ ಗೆ ಯತ್ನ

ಉಡುಪಿ: ಉಡುಪಿಯ ಸುವರ್ಣ ತ್ರಿಭುಜ ಬೋಟು ಅವಘಡದಲ್ಲಿ ನಾಪತ್ತೆಯಾಗಿದ್ದ ಭಟ್ಕಳದ ರಮೇಶ್ ಅವರ ಸಹೋದರ ಚಂದ್ರಶೇಖರ್ (30) ಅವರು ಅಣ್ಣನ ಚಿಂತೆಯಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಭವಿಸಿದ್ದು, ತಡವಾಗಿ‌ ಬೆಳಕಿಗೆ ಬಂದಿದೆ.
ಚಂದ್ರಶೇಖರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಈ ಘಟನೆ ಆಘಾತ ಉಂಟು ಮಾಡಿದೆ. ಡಿ.13ರಂದು ಸುವರ್ಣ ತ್ರಿಭುಜ ಬೋಟಿನಲ್ಲಿ ಇತರರೊಂದಿಗೆ ಮೀನು ಗಾರಿಕೆಗೆ ತೆರಳಿದ್ದ ರಮೇಶ್ ನಾಪತ್ತೆಯಾಗಿದ್ದರು. ಈ ಸುದ್ದಿ ಕೇಳಿ ಚಂದ್ರ ಶೇಖರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಕಳೆದ ಕೆಲವು ದಿನಗಳ ಹಿಂದೆ ಆಳಸಮುದ್ರದಲ್ಲಿ‌ ಸುವರ್ಣ ತ್ರಿಭುಜ ‌ಬೋಟ್ನ ಅವಶೇಷ ಪತ್ತೆಯಾದ ಅನಂತರ ಇಡೀ ಕುಟುಂಬವೇ ಆಘಾತಕ್ಕೆ ಒಳಗಾಗಿದೆ. ಇದರಿಂದಾಗಿ ತೀವ್ರ ನೊಂದಿದ್ದ ಚಂದ್ರಶೇಖರ ಕಳೆದ ನಾಲ್ಕು ದಿನಗಳ ಹಿಂದೆ ವಿಷ ಪದಾರ್ಥ ಸೇವಿಸಿದ್ದರು. ಈ ವಿಚಾರ ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು. ತೀವ್ರ ಅಸ್ವಸ್ಥಗೊಂಡ ಬಳಿಕ ವಿಷಯ ತಿಳಿದು ಬಂದಿದೆ ಎನ್ನಲಾಗಿದೆ.